ವೈದ್ಯಕೀಯ ಕ್ಷೇತ್ರದ ಸುಧಾರಣೆ; ಹೊಸ‌ ಶಿಕ್ಷಣ ನೀತಿ ರಚನೆಗಾಗಿ ‘ವಿಷನ್ ಗ್ರೂಪ್’ ರಚನೆ

ಬೆಂಗಳೂರು, ಜ. 01: ರಾಜ್ಯದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ಜಾರಿಗೊಳಿಸಿ, ಹೊಸ ಆರೋಗ್ಯ ನೀತಿ ರೂಪಿಸುವ ಸಲುವಾಗಿ ‘ವಿಷನ್ ಗ್ರೂಪ್’ ರಚಿಸಲಾಗಿದೆ.

ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಗಳನ್ನು ಜಾರಿಗೊಳಿಸಿ, ಹೊಸ ಆರೋಗ್ಯ ನೀತಿಯನ್ನು ರೂಪಿಸುವ ನಿಟ್ಟಿನಲ್ಲಿ ತಜ್ಞರ ವೈದ್ಯರನ್ನೊಳಗೊಂಡ ‘ವಿಷನ್ ಗ್ರೂಪ್’ ರಚಿಸಲಾಗಿದ್ದು, ಇಂದು ವಿಧಾನಸೌಧದಲ್ಲಿ ವಿಷನ್ ಗ್ರೂಪ್ ನ ಮೊದಲ ಸರ್ವ ಸದಸ್ಯರ ಸಭೆ ನಡೆಸಲಾಯಿತು.

ಈ ವಿಷನ್ ಗ್ರೂಪ್‌ನಲ್ಲಿ ವಿವಿಧ ವಿಶೇಷಜ್ಞತೆಗಳ ಸುಮಾರು 30 ಅನುಭವಿ ತಜ್ಞ ವೈದ್ಯರನ್ನ ಒಳಗೊಂಡಿದ್ದು ಸುಧಾರಣಾ ಕ್ರಮಗಳ ಬಗ್ಗೆ ಕಾಲಕಾಲಕ್ಕೆ ಸರ್ಕಾರಕ್ಕೆ ಸಲಹೆ ಮತ್ತು ಮಾರ್ಗದರ್ಶನ ನೀಡಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಷನ್ ಗ್ರೂಪ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಡಾ.ಗುರುರಾಜ್ ಅಧ್ಯಕ್ಷತೆಯಲ್ಲಿ ಗ್ರೂಪ್ ರಚನೆಯಾಗಿದ್ದು, ಆರೋಗ್ಯ ಕ್ಷೇತ್ರದ ಸಮಗ್ರ ಬದಲಾವಣೆ ಬಗ್ಗೆ ಚರ್ಚೆಯಾಗಿದೆ. 2017 ರ ಆರೋಗ್ಯ ನೀತಿ ನಮ್ಮಲ್ಲಿದೆ. ಇದರ ಜೊತೆಗೆ ರಾಜ್ಯದ ಜನರಿಗೆ ಸುಲಭವಾಗಿ ಪರಿಣಾಮಕಾರಿಯಾದ ಆರೋಗ್ಯ ಸೇವೆಗಳನ್ನು ಒದಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಾಥಮಿಕ, ಸಮುದಾಯ ಹಾಗೂ ಜಿಲ್ಲಾ ಮಟ್ಟದ್ದು ಎಂಬ ಮೂರು ಹಂತಗಳ ಆರೋಗ್ಯ ಸೇವೆ ಲಭ್ಯವಿದೆ. ಜೊತೆಗೆ ವೈದ್ಯಕೀಯ ಕಾಲೇಜುಗಳಿವೆ. ಇವುಗಳನ್ನು ಒಂದಕ್ಕೊಂದು ಸಂಪರ್ಕ ಕಲ್ಪಿಸಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕಿದೆ. ರೋಗ ಬಾರದಂತೆ ತಡೆಯುವ ಪ್ರಿವೆನ್ಶನ್ ಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ವ್ಯಕ್ತಿಗೆ ಯಾವ ರೋಗ ಬರಬಹುದು ಎಂದು ಪತ್ತೆ ಮಾಡಿ ಔಷಧಿ ನೀಡುವುದು, 35 ವರ್ಷ ಮೇಲ್ಪಟ್ಟವರಿಗೆ ರಕ್ತ ಪರೀಕ್ಷೆ ಮಾಡಿಸುವುದು, ಅಸಾಂಕ್ರಮಿಕ ರೋಗಗಳನ್ನು ಆರಂಭದಲ್ಲೇ ಪತ್ತೆ ಮಾಡಿ ಚಿಕಿತ್ಸೆ ನೀಡುವುದು ಮೊದಲಾದವುಗಳ ಬಗ್ಗೆ ಚರ್ಚೆಯಾಗಿದೆ. ಇವೆಲ್ಲವೂ ಸೇರಿದಂತೆ ಆರೋಗ್ಯ ಕರ್ನಾಟಕ ನಿರ್ಮಿಸಲು ವರದಿ ರೂಪಿಸಲು ಆರು ತಿಂಗಳ ಸಮಯ ನೀಡಲಾಗಿದೆ ಎಂದರು.

Exit mobile version