ನಾವು ಸಂಬಳ ಹೆಚ್ಚು ಮಾಡಲಿಕ್ಕೆ ಸಿದ್ದರಿದ್ದೇವೆ, ನೀವು ಕೆಲಸಕ್ಕೆ ಹಾಜರಾಗಿ: ಲಕ್ಷ್ಮಣ ಸವದಿ

ಬೀದರ್, ಏ. 07: ಸಾರಿಗೆ ನೌಕರರು ಮುಷ್ಕರ ಮಾಡುವುದಿಲ್ಲ ಎಂಬ ಆಶಾಭಾವನೆ ನಮಗಿತ್ತು. ನಾವು ಅವರಿಗೆ ಹೆಚ್ಚಿಗೆ ಸಂಬಳ  ಕೊಡಲು ಸಿದ್ಧರಿದ್ದೇವೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಬಳಿ ಒಪ್ಪಿಗೆ ಕೇಳಿದ್ದೇವೆ ಎಂದು ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಲಕ್ಷ್ಮಣ್ ಸವದಿ ಹೇಳಿದರು.

ಕೇಂದ್ರ ಚುನಾವಣಾ ಆಯೋಗದಿಂದ ಒಪ್ಪಿಗೆ ಆದೇಶ ಬಂದ ತಕ್ಷಣ ನಾವು ಸಂಬಳ ಜಾಸ್ತಿ ಮಾಡುತ್ತೇವೆ ಎಂದು ಹೇಳಿದ ಮೇಲೂ ಅವರು ಮುಷ್ಕರ ಮಾಡುತ್ತಿದ್ದಾರೆ. ಕೆಲವರು ಮುಷ್ಕರ ಮಾಡಿಸಲೇ ಬೇಕು ಎಂದು ಮಾಡಿಸುತ್ತಿದ್ದಾರೆ. ಅವರು ಯಾರು ಅಂತ ನಿಮಗೆ ಗೊತ್ತಾಗಲಿದೆ ಎಂದರು.

ಇಂದು ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ಖಾಸಗಿ ಬಸ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ನಮ್ಮ ಬಸ್ ನಿಲ್ದಾಣಲ್ಲಿ ನಿಲ್ಲಲು ಬಿಡಲಾಗಿದೆ. ಕೆಲವು ಖಾಸಗಿ ಬಸ್ ಗಳಿಗೆ ಪರ್ಮಿಟ್ ಇಲ್ಲದಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಖಾಸಗಿ ಬಸ್ ಓಡಾಟಕ್ಕೆ ಅವಕಾಶ ನೀಡಿದ್ದೇವೆ. ಖಾಸಗಿ ವಾಹನಗಳಿಗೆ ವಿಮೆ ಇದ್ದರೆ ಸಾಕು, ಪರ್ಮಿಟ್ ಇಲ್ಲದಿದ್ದರೂ ಅವಕಾಶ ನೀಡಿದ್ದೇವೆ ಎಂದರು.

ನಾವು ಸಂಬಳ ಹೆಚ್ಚು ಮಾಡಲಿಕ್ಕೆ ಸಿದ್ದರಿದ್ದೇವೆ, ನೀವು ಕೆಲಸಕ್ಕೆ ಹಾಜರಾಗಿ. ಹೀಗೆ ಮುಷ್ಕರ ಮುಂದುವರಿದರೆ ಆದಾಯ ಬರುವುದಿಲ್ಲ. ಮುಂದೆ ಸಂಬಳ ಕೊಡಲು ಸಹ‌ ಕಷ್ಟವಾಗುತ್ತದೆ. ಎಷ್ಟು ದಿನ ಮುಷ್ಕರ ಮುಂದುವರೆಸುತ್ತೀರಿ ಅಷ್ಟು ದಿನ ನಷ್ಷವಾಗುತ್ತದೆ. ಹೀಗಾದರೆ ಈ ತಿಂಗಳ ಸಂಬಳವನ್ನು ಕೊಡಲು ಸಹ‌ ಸಾಧ್ಯವಾಗುವುದಿಲ್ಲ. ಯಾರು ಕೆಲಸಕ್ಕೆ ಬರುವುದಿಲ್ಲವೋ ಅವರಿಗೆ ಸಂಬಳ ಕೊಡಲು ಸಾಧ್ಯವಿಲ್ಲ ಎಂದು ಖಡಕ್‌ ಆಗಿ ಹೇಳಿದರು.

ಯಾರದೋ ಮಾತು ಕೇಳಿ ಹಟಮಾರಿತನದಿಂದ ಮುಷ್ಕರ ಮಾಡಿದರೆ ನೀವೇ ಕಷ್ಟ ಅನುಭವಿಸುವುದು ಸರಿಯಲ್ಲ. ಇವತ್ತೇ ಮುಷ್ಕರ ಕೊನೆಗೊಳಿಸಿ ನಾಳೆಯಿಂದ ಕೆಲಸಕ್ಕೆ ಹಾಜರಾಗಿ. ನೀವು ಹೀಗೆ ಮಾಡಿದರೆ ಸಾರ್ವಜನಿಕರಿಗೆ, ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಮನವಿ ಮಾಡಿದರು.

Exit mobile version