ಚೀನೀ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ

ವಾಷಿಂಗ್ಟನ್, ಮೇ. 08: ಚೀನೀ ಸಂಸ್ಥೆ ಸಿನೋಫಾರ್ಮ್ ತಯಾರಿಸಿದ ಕೊರೋನಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಗೆ ಒಪ್ಪಿಗೆ ಸೂಚಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಹೊರತುಪಡಿಸಿ ಬೇರ್ಯಾವುದೇ ದೇಶ ತಯಾರಿಸಿದ ಲಸಿಕೆಯೊಂದಕ್ಕೆ ಇದೇ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿತ ಬಿದ್ದಿದೆ. ಚೈನಾ ಮತ್ತು ಬೇರೆ ಕೆಲ ದೇಶಗಳ ಲಕ್ಷಾಂತರ ಜನರಿಗೆ ಈಗಾಗಲೇ ಈ ಲಸಿಕೆ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಇದುವರಗೆ ಫೈಜರ್, ಆಸ್ಟ್ರಾಜೆನೆಕಾ, ಜಾನ್ಸನ್ & ಜಾನ್ಸನ್ ಮತ್ತು ಮಾಡೆರ್ನಾ ತಯಾರಿಸಿದ ಲಸಿಕೆಗಳಿಗೆ ಮಾತ್ರ ಒಪ್ಪಿಗೆ ಸೂಚಿಸಿತ್ತು.

ಆದರೆ ಆಫ್ರಿಕಾದ ಬಡ ರಾಷ್ಟ್ರಗಳೂ ಸೇರಿದಂತೆ ಲ್ಯಾಟಿನ್ ಅಮೇರಿಕಾ ಮತ್ತು ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಈಗಾಗಲೇ ಚೀನೀ ಲಸಿಕೆ ಬಳಕೆಯಾಗುತ್ತಿದೆ. ಚೀನೀ ಲಸಿಕೆಗಳ ಸಾಮರ್ಥ್ಯದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೊಂಲದಗಳಿವೆ. ಆದರೆ ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆ ಸಿನೊಫಾರ್ಮ್ ಲಸಿಕೆಯನ್ನು ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ್ದು ಎಂದು ಅಂಗೀಕರಿಸಿದೆ.

ಈ ಹೊಸ ಲಸಿಕೆ ಸೇರ್ಪಡೆ ಅನೇಕ ದೇಶಗಳಲ್ಲಿ ವೇಗವಾಗಿ ಲಸಿಕೆ ನೀಡಲು ಮತ್ತು ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್​ಲೈನ್ ವರ್ಕರ್ಸ್​ನ್ನು ಸೋಂಕಿನಿಂದ ಕಾಪಾಡಲು ಬಹಳ ಅವಶ್ಯಕವಾಗಿದೆ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಈ ಲಸಿಕೆಯನ್ನು ನೀಡಬಹುದಾಗಿದೆ. ಭವಿಷ್ಯದಲ್ಲಿ ಮತ್ತೊಂದು ಚೈನಾ ಲಸಿಕೆ ಸಿನೊವ್ಯಾಕ್ ಕೂಡಾ ಬಿಡುಗಡೆಯಾಗುವ ಸಾಧ್ಯತೆ ಇದೆ.

Exit mobile version