ಯೋಗಿ ಸಂಪುಟದಲ್ಲಿ ಏಕೈಕ ಯುವ ಮುಸ್ಲಿಂ ಸಚಿವ!

Political

ನಿನ್ನೆ ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದಲ್ಲಿ, ಉತ್ತರಪ್ರದೇಶದಲ್ಲಿ(Uttarpradesh) ಬಿಜೆಪಿ ಸರ್ಕಾರ(BJP Government) ರಚನೆಯಾಗಿದೆ. ವಿಜೃಂಭಣೆಯಿಂದ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಅವರೊಂದಿಗೆ 52 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಎರಡನೇಯ ಅವಧಿಗೆ ಮತ್ತೇ ಅಧಿಕಾರಕ್ಕೇರಿರುವ ಯೋಗಿ ಆದಿತ್ಯನಾಥ್ ತಮ್ಮ ಸಂಪುಟದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ವಿದ್ಯಾರ್ಥಿ ಘಟಕದಲ್ಲಿ ಗುರುತಿಸಿಕೊಂಡಿದ್ದ, ಯುವ ಮುಸ್ಲಿಂ ನಾಯಕನಿಗೆ ಸಚಿವ ಸ್ಥಾನ ನೀಡಿದ್ದಾರೆ.


ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನಲ್ಲಿ ಕಳೆದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಡ್ಯಾನಿಶ್ ಆಜಾದ್ ಅವರಿಗೆ ಯೋಗಿ ಸಂಪುಟದಲ್ಲಿ ಸಚಿವ ಸ್ಥಾನ ಒಲಿದಿದೆ. ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವ ಡ್ಯಾನಿಶ್ ಆಜಾದ್, ಕಳೆದ ಆರು ವರ್ಷಗಳಿಂದ ಉತ್ತರಪ್ರದೇಶದಲ್ಲಿ ಬಿಜೆಪಿಯ ವಿದ್ಯಾರ್ಥಿ ಘಟಕದಲ್ಲಿ ಸಂಘಟನೆಯ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಉತ್ತಮ ಸಂಘಟನಾ ಚಾತುರ್ಯ ಹೊಂದಿರುವ ಡ್ಯಾನಿಶ್ ಅವರನ್ನು ಕಳೆದ ವಿಧಾನಸಭಾ ಚುನಾವಣೆಗು ಮೊದಲು ಉತ್ತರಪ್ರದೇಶದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಯೋಗಿ ಪರ ಸಾಕಷ್ಟು ಪ್ರಚಾರ ಕಾರ್ಯಕೈಗೊಂಡ ಡ್ಯಾನಿಶ್ ಆಜಾದ್, ಮುಸ್ಲಿಂ ಯುವಕರನ್ನು ಬಿಜೆಪಿಗೆ ಸೆಳೆಯುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದ್ದರು.

ಡ್ಯಾನಿಶ್ ಪ್ರಭಾವದಿಂದ ಅನೇಕ ಮುಸ್ಲಿಂ ಯುವಕರು ಆರ್‍ಎಸ್‍ಎಸ್ ಸಂಘಟನೆಯನ್ನು ಸೇರಿದ್ದು ವಿಶೇಷವಾಗಿತ್ತು. ಇನ್ನು 32 ವರ್ಷದ ಡ್ಯಾನಿಶ್ ಆಜಾದ್ ವಾಣಿಜ್ಯ ಪದವಿಯನ್ನು ಪೂರ್ಣಗೊಳಿಸಿದ್ದಾರೆ. 2011ರಿಂದ ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್‍ನೊಂದಿಗೆ ಗುರುತಿಸಿಕೊಂಡಿರುವ ಅವರು, ಅನೇಕ ವರ್ಷಗಳಿಂದ ಎಬಿವಿಪಿ ಸಂಘಟನೆಗಾಗಿ ಕೆಲಸ ಮಾಡಿದ್ದಾರೆ. 2018ರಲ್ಲಿ ಇವರನ್ನು ಫಕ್ರುದ್ದೀನ್ ಅಲಿ ಸ್ಮಾರಕ ಸಮಿತಿ ಸದಸ್ಯರಾಗಿ, ಉರ್ದು ಭಾಷಾ ಸಮಿತಿ ಸದಸ್ಯರನ್ನಾಗಿ ಯೋಗಿ ಆದಿತ್ಯನಾಥ್ ಸರ್ಕಾರ ನೇಮಿಸಿತ್ತು. ಇದೀಗ ಇವರ ಸಂಘಟನಾ ಚಾತುರ್ಯಕ್ಕೆ ಸಚಿವ ಸ್ಥಾನ ಒಲಿದಿದೆ.

Exit mobile version