ಎಲ್ಲ ಧರ್ಮದವರ ಧಾರ್ಮಿಕ ಕ್ಷೇತ್ರಗಳಲ್ಲಿರುವ ಅಕ್ರಮ ಧ್ವನಿವರ್ಧಕಗಳ(Loudspeakers) ತೆರವು ಕಾರ್ಯಾಚರಣೆಯನ್ನು ಉತ್ತರಪ್ರದೇಶ(Uttarpradesh) ಪೊಲೀಸರು ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ(Maharashtra) ಅಕ್ರಮ ಧ್ವನಿವರ್ಧಕ ಕಾರ್ಯಾಚರಣೆ ಭಾರೀ ಸುದ್ದಿಯಲ್ಲಿರುವ ನಡುವೆ ಉತ್ತರಪ್ರದೇಶದಲ್ಲಿ ಇದುವರೆಗೂ ಸಮಾರು 10,900 ಎಲ್ಲ ಧರ್ಮದವರಿಗೆ ಸೇರಿದ ಧಾರ್ಮಿಕ ಕೇಂದ್ರಗಳ ಅಕ್ರಮ ಧ್ವನಿವರ್ಧಕಗಳನ್ನು ತೆರವು ಮಾಡಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ. ಏಪ್ರಿಲ್ 30ರೊಳಗೆ ರಾಜ್ಯದಲ್ಲಿನ ಎಲ್ಲ ಅಕ್ರಮ ಧ್ವನಿವರ್ಧಕಗಳನ್ನು ತೆರವು ಮಾಡಬೇಕು. ಅಧಿಕೃತ ಧ್ವನಿವರ್ಧಕಗಳಿಗೆ ನಿಗದಿತ ಡೆಸಿಬಲ್ ಅಳವಡಿಕೆ ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಬೇಕೆಂದು ಮುಖ್ಯಮಂತ್ರಿ(Chiefminsiter) ಯೋಗಿ ಆದಿತ್ಯನಾಥ್(Yogi Adityanath) ಪೊಲೀಸರಿಗೆ ಸೂಚಿಸಿದ್ದರು.
ಯೋಗಿ ಆದಿತ್ಯನಾಥ್ ನೀಡಿದ ಸೂಚನೆ ಬಳಿಕ ಸತತ ದಾಳಿ ನಡೆಸುತ್ತಿರುವ ಉತ್ತರಪ್ರದೇಶ ಪೊಲೀಸರು ಲಕ್ನೋದಲ್ಲಿ 2388, ಗೋರಖ್‍ಪುರದಲ್ಲಿ 1765 ಅಕ್ರಮ ಧ್ವನಿವರ್ಧಕಗಳನ್ನು ತೆರವು ಮಾಡಿದ್ದಾರೆ. 2018ರಲ್ಲಿ ನ್ಯಾಯಾಲಯ ನೀಡಿದ ಆದೇಶದನ್ವಯ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಅಕ್ರಮ ಮತ್ತು ಅನಧಿಕೃತ ಧ್ವನಿವರ್ಧಕಗಳನ್ನು ಇನ್ನು ಮುಂದೆ ಬಳಸಿದರೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಲಾಗಿದೆ.

ಮಥುರಾದ ಶ್ರೀಕೃಷ್ಣ ಮಂದಿರ ಸೇರಿದಂತೆ ಉತ್ತರಪ್ರದೇಶದ ಅನೇಕ ಮಂದಿರ, ಮಸೀದಿಗಳಿಗೆ ನಿಗದಿತ ಡೆಸಿಬಲ್‍ಗಿಂತ ಹೆಚ್ಚಿನ ಶಬ್ದ ಬಳಸದಂತೆ ಸೂಚನೆ ನೀಡಲಾಗಿದೆ. 3500 ಧಾರ್ಮಿಕ ಕೇಂದ್ರಗಳಲ್ಲಿನ ಮೈಕ್‍ಗಳಿಗೆ ನಿಗದಿತ ಡೆಸಿಬಲ್ ಸೆಟ್ ಮಾಡಿಸಲಾಗಿದೆ. ಪ್ರತಿ ಮಂದಿರ ಮತ್ತು ಮಸೀದಿಗಳಿಗೆ ಭೇಟಿ ನೀಡುತ್ತಿರುವ ಪೊಲೀಸರು ಶಬ್ದ ಮಾಲಿನ್ಯವಾಗದಂತೆ ನಿಗದಿತ ಡೆಸಿಬಲ್ ಬಳಸಲು ಎಚ್ಚರಿಕೆ ನೀಡುತ್ತಿದ್ದಾರೆ. ರಾಜ್ಯದ ಎಲ್ಲ ಪಟ್ಟಣ ಪ್ರದೇಶದಲ್ಲಿರುವ ಅಕ್ರಮ ಮೈಕ್‍ಗಳನ್ನು ತೆರವು ಮಾಡುತ್ತಿದ್ದಾರೆ.
ಏಪ್ರಿಲ್ 30ರೊಳಗೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಳ್ಳಿಗಳಿಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ ಬಳಿಕ ಕಾರ್ಯಾಚರಣೆ ಚುರುಕು ಪಡೆದುಕೊಂಡಿದೆ.