ಯೂತ್‌ ಕಾಂಗ್ರೆಸ್ ಚುನಾವಣೆಯಲ್ಲಿ ಹಸ್ತಕ್ಷೇಪ ಇಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು, ಜ. 11: ಯೂಥ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಪಾರದರ್ಶಕವಾಗಿ ನಡೆಯಲಿ. ಪಕ್ಷ ಸಂಘಟನೆ ಮಾಡುವ ಉತ್ತಮ ನಾಯಕನ ಆಯ್ಕೆಯಾಗಲಿ. ತಾವು ಈ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ತಾಲೂಕು ಮಟ್ಟದಿಂದ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದವರೆಗೂ ನಾಯಕರು ಬೆಳೆಯಬೇಕು ಎಂಬುದು ನಮ್ಮ ನಾಯಕರಾದ ರಾಜೀವ್ ಗಾಂಧಿ ಅವರ ಚಿಂತನೆ. ಅದಕ್ಕಾಗಿ ಅವರು ಸಂವಿಧಾನ ತಿದ್ದುಪಡಿ ತಂದರು.

ನಾವು ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಿಲ್ಲಿಸಿದ್ದೇವೆ. ಹೀಗಾಗಿ ಯೂಥ್ ಕಾಂಗ್ರೆಸ್ ಚುನಾವಣೆ ನಡೆಯುತ್ತಿದೆ. ಪಾರದರ್ಶಕ ಹಾಗೂ ಮುಕ್ತವಾಗಿ ಚುನಾವಣೆ ನಡೆಯಬೇಕು. ಪಕ್ಷದ ಅಧ್ಯಕ್ಷನಾಗಿ ನಾನು ಯಾರ ಪರವಾಗಿ ನಿಲ್ಲುವುದಿಲ್ಲ. ಯಾರಿಗೂ ವಿರೋಧ ಮಾಡುವುದಿಲ್ಲ.‌ ಯಾರಿಗೆ ಆಸಕ್ತಿ ಇದೆಯೋ, ಯಾರು ಪಕ್ಷಕ್ಕೆ ಸಮಯ ಕೊಟ್ಟು ಸಂಘಟನೆಗೆ ಶ್ರಮಿಸುತ್ತಾರೋ ಅಂತಹವರನ್ನು ಆಯ್ಕೆ ಮಾಡಿ ಕಳುಹಿಸಿ ಎಂದು ಮತದಾರರಿಗೆ ಮನವಿ ಮಾಡುತ್ತೇನೆ.

ಮಂಗಳೂರಿನಲ್ಲಿ ಮಿಥುನ್ ರೈಗೆ ಹೆಚ್ಚಿನ ಜವಾಬ್ದಾರಿ ಇದೆ. ಹಿಂದೆ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ನಾನು ಅವರಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸಲಹೆ ಕೊಟ್ಟೆ. ಬೇರೆಯವರಲ್ಲಿ ಸ್ಪರ್ಧಿಸುವ ಉತ್ಸಾಹ ಇತ್ತು. ಮಿಥುನ್ ನನ್ನ ಆಪ್ತ. ನನ್ನ ಹೆಸರಿಂದ ಒಬ್ಬರಿಗೆ ಅನುಕೂಲವಾಗಿ ಮತ್ತೊಬ್ಬರಿಗೆ ಹಿನ್ನಡೆಯಾಗುವುದು ಬೇಡ ಎಂದು ನಾನು ಸಲಹೆ ನೀಡಿದೆ.

Exit mobile version