ಕೊರೊನಾ ಸೋಂಕಿತ ಪುಟ್ಟ ಮಗು ಸಾವನ್ನಪ್ಪಿದೆ ಎಂದು ಇಲಿನಾಯ್ಸ್ ರಾಜ್ಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೊರೊನಾಗೆ ಬಲಿಯಾದ ಅತ್ಯಂತ ಕಿರಿಯ ವಯಸ್ಸಿನ ಅಪರೂಪದ ಪ್ರಕರಣ ಎಂದು ಗುರುತಿಸಲಾಗಿದೆ.
ಇಲಿನಾಯ್ಸ್ ರಾಜ್ಯದ ಗವರ್ನರ್ ಜೆಬಿ ಪ್ರಿಟ್‍ಜ್ಕೆರ್ ಅವರು ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಸುದ್ದಿ ತಿಳಿಸಲು ಭಾರೀ ಸಂಕಟವಾಗುತ್ತಿದೆ. ವಿಶೇಷವಾಗಿ ನಾನು ಹೇಳಲು ಹೊರಟಿರುವುದು ಚಿಕ್ಕ ಮಗುವಿನ ಬಗ್ಗೆ. ಹಿಂದಿನ 24 ಗಂಟೆಗಳ ಅವಧಿಯಲ್ಲಿ ಕೊರೊನಾ ವೈರಸ್‍ಗೆ ಸಂಬಂಧಿಸಿದ ಸಾವುನೋವುಗಳಲ್ಲಿ ಪುಟ್ಟ ಮಗುವೊಂದು ಸೇರಿದೆ ಎಂದು ತಿಳಿಸಿದ್ದಾರೆ.
ಚಿಕ್ಯಾಗೋದಲ್ಲಿ ನಿಧನವಾದ ಮಗು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದಾಗಿದೆ. ಕೊರೊನಾ ಪರೀಕ್ಷೆಯಲ್ಲಿ ಮಗುವಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ಅಮೆರಿಕವು ವಿಶ್ವದಲ್ಲೇ ಅತಿ ಹೆಚ್ಚು ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ಹೊಂದಿದೆ. 1,24,000ಕ್ಕಿಂತ ಹೆಚ್ಚು ಪ್ರಕರಣಗಳಿದ್ದು, 2,227 ಜನ ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ ಶನಿವಾರ ಮಧ್ಯಾಹ್ನದ ನಂತರದ 24 ಗಂಟೆಗಳ ಅವಧಿಯಲ್ಲಿ 450ಕ್ಕೂ ಹೆಚ್ಚು ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇಲಿನಾಯ್ಸ್ ನಲ್ಲಿ ಮಗು ಸೇರಿದಂತೆ 13 ಹೊಸ ಸಾವು ದಾಖಲಾಗಿದೆ