ಅರಬ್ ರಾಷ್ಟ್ರದಲ್ಲಿ ಕ್ರಿಕೆಟ್ ಕಲರವ ಶುರುವಾಗಿದ್ದು, ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಭಾಗವಹಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‍ಕೆ) ತಂಡದ ಆಟಗಾರರು ಶುಕ್ರವಾರ ದುಬೈನತ್ತ ಪ್ರಯಾಣ ಬೆಳೆಸಿದರು.
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಎಂ.ಎಸ್.ಧೋನಿ ಸಾರಥ್ಯದ ಸಿಎಸ್‍ಕೆ ತಂಡ ಚೆನ್ನೈ ವಿಮಾನ ನಿಲ್ದಾಣದಿಂದ ಯುಎಇಗೆ ಹೊರಟಿತು. ಧೋನಿ ನೇತೃತ್ವದಲ್ಲಿ ದುಬೈನತ್ತ ಹೊರಟ ಆಟಗಾರರು, ಟೂರ್ನಿಯಲ್ಲಿ ಯಶಸ್ವಿ ಪ್ರದರ್ಶನ ನೀಡಿ, ಪ್ರಶಸ್ತಿ ಗೆಲ್ಲುವ ಉತ್ಸಾಹದಿಂದಲೇ ಅರಬ್ ರಾಷ್ಟ್ರಕ್ಕೆ ಹೊರಟರು.
ದುಬೈಗೆ ತೆರಳುವ ಸಲುವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೂಲ್ ಕ್ಯಾಪ್ಟನ್ ಧೋನಿ ತಮ್ಮ ಎಂದಿನ ಮಂದಹಾಸದಿಂದ ಎಲ್ಲರ ಗಮನ ಸೆಳೆದರು. ಇವರೊಂದಿಗೆ ತಂಡದ ಸಹ ಆಟಗಾರ ಹಾಗೂ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಿಂದ ನಿವೃತ್ತಿ ಘೋಷಿಸಿದ ಸುರೇಶ್ ರೈನಾ, ರವೀಂದ್ರ ಜಡೇಜಾ ಹಾಗೂ ಇತರೆ ಆಟಗಾರರು ಸಹ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಇನ್ನೂ ಚೆನ್ನೈ ತಂಡದ ಮತ್ತೊಬ್ಬ ಆಟಗಾರ ಶೇನ್ ವಾಟ್ಸನ್, ಗುರುವಾರ ದುಬೈ ತಲುಪಿದ್ದು, ದುಬೈನ ಹೋಟೆಲ್‍ನಲ್ಲಿ ತಾವು ಕ್ವಾರಂಟೈನ್‍ನಲ್ಲಿ ಇರುವ ವಿಡಿಯೋವನ್ನು ಶುಕ್ರವಾರ ಬೆಳಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉಳಿದಂತೆ ಸಿಎಸ್‍ಕೆ ತಂಡದ ಪ್ರಮುಖ ಆಟಗಾರರಾದ ಫಾಫ್ ಡುಪ್ಲೆಸ್ಸಿ,
ಲುಂಗಿ ಎನ್‍ಗಿಡಿ, ಹರ್ಭಜರ್ ಸಿಂಗ್ ಅವರುಗಳು ಸೆಪ್ಟೆಂಬರ್ ಮೊದಲ ವಾರದಲ್ಲಿ ಯುಎಇ ತಲುಪಲಿದ್ದಾರೆ. ಇನ್ನೂ ಡ್ವೇನ್ ಬ್ರಾವೋ, ಇಮ್ರಾನ್ ತಾಹಿರ್, ಮಿಚೆಲ್ ಸ್ಯಾಟ್ನರ್ ಅವರುಗಳು ಈಗಾಗಲೇ ಆರಂಭವಾಗಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ಮುಗಿದ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ.
ದುಬೈಗೆ ಹೊರಟ ಆರ್.ಸಿ.ಬಿ ಆಟಗಾರರು:
ಐಪಿಎಲ್ ಟೂರ್ನಿಯ ಹಾಟ್ ಫೇವರೆಟ್ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಸಹ ಶುಕ್ರವಾರ ಬೆಳಗ್ಗೆ ದುಬೈಗೆ ಹೊರಟರು. ಈ ಸಂಬಂಧ ಆರ್.ಸಿ.ಬಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಂಡದ ಆಟಗಾರರು ವಿಮಾನದಲ್ಲಿ ಕುಳಿತಿರುವ ಫೋಟೋ ಶೇರ್ ಮಾಡಲಾಗಿದೆ. ಆದರೆ ಈ ಫೋಟೋದಲ್ಲಿ ತಂಡದ ನಾಯಕ ವಿರಾಟ್ ಕೋಹ್ಲಿ, ಕಾಣಿಸಿಕೊಂಡಿಲ್ಲ.
ಉಳಿದಂತೆ ಐಪಿಎಲ್ ಟೂರ್ನಿಯ ಇತರೆ ತಂಡಗಳಾದ ಸನ್‍ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಕಿಂಗ್ಸ್ ಇಲವೆನ್ ಪಂಜಾಬ್, ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್ ತಂಡಗಳ ಆಟಗಾರರು ಈಗಾಗಲೇ ದುಬೈ ತಲುಪಿದ್ದಾರೆ.