ಮಳೆಗಾಲ ಬಂತೆಂದರೆ ಸಾಕು ಬಿದಿರು ಮರಿಯಿಡುತ್ತದೆ .ಅಂದರೆ ಬಿದಿರಿನ ಬುಡದಲ್ಲಿ ಸಣ್ಣ ಸಣ್ಣ ಚಿಗುರು ಬಂದು ಪುಟ್ಟ ಗಿಡಗಳಾಗಿರುವಾಗ ಅದನ್ನು ಕಳಲೆ ಅಥವಾ ಕಣಿಲೆ ಎಂದು ಕರೆಯುತ್ತಾರೆ, ಅತಿ ಶೀರ್ಘದಲ್ಲಿ ಇದು ಬೆಳೆದು ಬಿದಿರಾಗುತ್ತದೆ 2,3,ತಿಂಗಳಲ್ಲಿ ಇದು ಎತ್ತರಕ್ಕೆ ಬೆಳೆಯುತ್ತದೆ, ಆದ್ದರಿಂದ ಇದು ಸಣ್ಣ ಚಿಗುರಿದ್ದಾಗಲೇ ಇದನ್ನು ಕಟ್ ಮಾಡಿ ತಂದು ಇದರ ಮೇಲಿನ ಸಿಪ್ಪೆ ತೆಗೆದು ತಿರುಳನ್ನು ಉಪ್ಪು ಹಾಕಿ ನೀರಲ್ಲಿ ಕೆಲವು ದಿನ ಇಟ್ಟು ನೀರು ಬದಲಾಯಿಸುತ್ತಾ ಇದ್ದು ಹಾಗೇ ಸ್ವಲ್ಪ ದಿನದ ಬಳಿಕ ಇದನ್ನು ಪಲ್ಯ ಹಾಗೂ ಸಾಂಬಾರ್ ಮಾಡಿದರೆ ಒಳ್ಳೆಯ ರುಚಿಯಾದ ಖಾದ್ಯವಾಗುತ್ತದೆ.
ಸುಣ್ಣ ಖನಿಜದ ಅಂಶವನ್ನು ಇದು ಹೊಂದಿದ್ದು ವಿಟಮಿನ್ ಸಿ ಇದರಲ್ಲಿದ್ದು ಆರೋಗ್ಯಕ್ಕೆ ಇದು ಉತ್ತಮವಾಗಿದೆ. ಕಳಲೆಯ ಜೊತೆ ಮೊಳಕೆ ಬರಿಸಿದ ಹೆಸರು ಕಾಳನ್ನು ಬೆರೆಸಿ ಸಾಂಬಾರ್ ಮಾಡಿದರೆ ಸವಿಯಲು ರುಚಿಯಾಗಿರುತ್ತದೆ. ಇದನ್ನು ವರ್ಷಕ್ಕೆ ಒಮ್ಮೆ ತಿಂದರೆ ಹೊಟ್ಟೆಯಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ಹೊರಹಾಕುತ್ತದೆ.
ಅಕಸ್ಮಾತ್ ಹೊಟ್ಟೆಯಲ್ಲೇನಾದರೂ ಕೂದಲು ಕಲ್ಲುಗಳು ಇದ್ದರೆ ಅದನ್ನು ಕರಗಿಸುತ್ತದೆ ಎಂದು ಹಿರಿಯರ ನಂಬಿಕೆಯಾಗಿದೆ. ಆದ್ದರಿಂದ ಇದನ್ನು ವರ್ಷಕ್ಕೊಮ್ಮೆ ತಿನ್ನಲೇ ಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹೀಗೆ ಕಳಲೆಯಿಂದಲೂ ನಮ್ಮ ಆರೋಗ್ಯಕ್ಕೆ ಪ್ರಯೋಜನವಿದೆ ಎಂದು ತಿಳಿಯುತ್ತದೆ.
ಈ ಬಿದಿರು ಬೆಳೆದು ದೊಡ್ಡದಾದ ಮೇಲೆ ಸುಮಾರು ಎತ್ತರಕ್ಕೆ ಬೆಳೆಯುತ್ತದೆ. ಮಲೆನಾಡು ಹಾಗೂ ಕರಾವಳಿಯಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ ಬೆಳೆದು ದೊಡ್ಡದಾದ ಬಿದಿರುಗಳನ್ನು ,ಬೇರೆ ಬೇರೆ ಕರಕುಶಲ ವಸ್ತುಗಳನ್ನೂ ತಯಾರಿಸಲು ಉಪಯೋಗಿಸುತ್ತಾರೆ. ಫರ್ನೀಚರ್, ತೊಟ್ಟಿಲು, ಚಪ್ಪರ, ಹೀಗೆ ಅನೇಕ ಮನೆ ಬಳಕೆಗೆ ಆಗುವಂತಹ ವಸ್ತುಗಳನ್ನು ತಯಾರಿಸಲು ಇದರ ಉಪಯೋಗವಿದೆ.