ಕ್ರಿಕೆಟ್‌ನಲ್ಲಿ ದಾಖಲೆಗಳಿಗೇನು ಕೊರತೆಯಿಲ್ಲ, ವಿಶ್ವದ ಹಿರಿಯ ಆಟಗಾರರಿಂದ ಕಿರಿಯ ಆಟಗಾರರವರೆಗೂ ಹಲವರು ತಮ್ಮದೇ ದಾಖಲೆ ನಿರ್ಮಿಸಿದ್ದಾರೆ. ಇಂತಹುದೇ ವಿಶೇಷ ದಾಖಲೆಯೊಂದನ್ನ ಬೆಲ್ಜಿಯಂ ಕ್ರಿಕೆಟ್ ತಂಡದ ನಾಯಕ ಶಹೇರಿಯಾರ್ ಬಟ್ ನಿರ್ಮಿಸಿದ್ದಾರೆ.
ವಿಶ್ವ ಕ್ರಿಕೆಟ್ ಲೋಕದಲ್ಲಿ ಬೆಲ್ಜಿಯಂ ತಂಡ ಈಗಷ್ಟೇ ಅಂಬೆಗಾಲಿಡುತ್ತಿದೆ. ಆದರೆ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸದ್ದು ಮಾಡಿರುವ ಶಹೇರಿಯಾರ್ ಬಟ್, ಟಿ20 ಕ್ರಿಕೆಟ್‌ನಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಟಿ20 ಪಂದ್ಯಗಳಲ್ಲಿ ಅರ್ಧಶತಕ ಮತ್ತು ಶತಕ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಬೆಲ್ಜಿಯಂ ಹಾಗೂ ಲಕ್ಸೆಂಬರ್ಗ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಅಜೇಯ 81 ರನ್‌ಗಳಿಸಿದ ಶಹೇರಿಯಾರ್, ಎರಡನೇ ಪಂದ್ಯದಲ್ಲಿ ಜೆಕ್ ರಿಪಬ್ಲಿಕ್ ತಂಡದ ವಿರುದ್ಧ ಅಜೇಯ 124 ರನ್‌ಗಳಿಸಿ ಮಿಂಚಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ದಿನ 50 ಮತ್ತು 100 ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ಹಿಂದೆ ಆಫ್ಘಾನಿಸ್ತಾನದ ಮೊಹಮ್ಮದ್ ಶಹಜ಼ಾದ್, ಒಂದೇ ದಿನದಂದು ನಡೆದ ಎರಡು ಪ್ರತ್ಯೇಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಎರಡು ಅರ್ಧಶತಕ ಗಳಿಸಿದ್ದು, ಈವರೆಗಿನ ದಾಖಲೆಯಾಗಿತ್ತು.