ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಹಾಗೂ ಬಾಲಿವುಡ್ ಡ್ರಗ್ಸ್ ಜಾಲದ ನಂಟಿನ ಕುರಿತು ಹೇಳಿಕೆ ನೀಡಿರುವ ನಟಿ ಕಂಗನಾ ರಣಾವತ್‍ಗೆ, ತಿರುಗೇಟು ನೀಡಿರುವ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ, ನಿಮ್ಮ ಸಹೋದ್ಯೋಗಿ ದೀಪಿಕಾ ಪಡುಕೋಣೆ ಅವರನ್ನು ನೋಡಿ ಕಲಿತುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಕಂಗನಾ ರಣಾವತ್ ಬಗ್ಗೆ ಟ್ವೀಟ್ ಮಾಡಿರುವ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ, “ನೀವು ನಿಜವಾಗಿಯೂ ಮಾದಕ ವ್ಯಸನದ ಬಗ್ಗೆ ಏನಾದರೂ ಮಾಡಲು ಬಯಸಿದ್ದರೆ, ಡ್ರಗ್ಸ್ ವಿರೋಧಿ ಆಂದೋಲನಕಾರರಾಗಿ. ವೀಡಿಯೊದಲ್ಲಿ ನೀವು ಮಾದಕ ವ್ಯಸನಿ ಎಂದು ಹೇಳಿದ್ದೀರಿ.
ನೀವು ಧೈರ್ಯವನ್ನು ತೋರಿಸಿದ್ದೀರಿ. ನಿಮ್ಮ ಅನುಭವದ ಬಗ್ಗೆ ಮತ್ತು ನೀವು ಅದನ್ನು ಹೇಗೆ ಗೆದ್ದು ಚಟದಿಂದ ಹೊರ ಬಂದಿರಿ ಎಂದು ಮಾತನಾಡಿ. ಸಂಜಯ್ ದತ್ ಅವರು ಇದನ್ನು ಹೇಳಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
”ಮಾತನಾಡುವುದು ಮತ್ತು ಜೀವನದಲ್ಲಿ ಮಾಡಿ ತೋರಿಸುವದರಲ್ಲಿ ವ್ಯತ್ಯಾಸವಿದೆ. ನಿಮ್ಮ ಸಹೋದ್ಯೋಗಿ ದೀಪಿಕಾ ಪಡುಕೋಣೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಖಿನ್ನತೆಯ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುತ್ತಿದ್ದಾರೆ. ಖಿನ್ನತೆಯಿಂದ ಬಳಲುತ್ತಿರುವ ಲಕ್ಷಾಂತರ ಜನರಿಗೆ ಸಹಾಯ ಮಾಡುವ ಸಂಸ್ಥೆ ಸ್ಥಾಪಿಸಿದ್ದಾರೆ. ಅವರನ್ನು ನೋಡಿ ಕಲಿಯಿರಿ” ಎಂದು ಹೇಳಿದ್ದಾರೆ.
“ನೀವು ಆಯ್ಕೆ ಮಾಡಿಕೊಂಡ ಮಾರ್ಗ ತಪ್ಪಾಗಿರುವುದು ದುಃಖಕರ. ಬಹಿರಂಗಪಡಿಸುವ ಬೆದರಿಕೆ ಹಾಕುವ ಬದಲು, ನಿಮ್ಮ ಸಲಹೆ ಸಹಾನುಭೂತಿ ತೋರಿಸಿ. ಇಷ್ಟವಿದ್ದಲ್ಲಿ ಮಾದಕ ವ್ಯಸನಿಗೆ ಹೊಸ ಜೀವನ ಕಟ್ಟಿಕೊಳ್ಳಲು ನೆರವಾಗಿ. ಡ್ರಗ್ಸ್ ಜಾಲದಲ್ಲಿ ಸಿಲುಕಿದವರು ಜೀವನದ ಸುಂದರ ಕ್ಷಣ ಮತ್ತು ಸಂತೋಷದಿಂದ ವಂಚಿತರಾಗಿರುತ್ತಾರೆ. ಆಧ್ಯಾತ್ಮದ ಅನ್ವೇಷಕರಾದ ನಿಮಗೆ ಈ ಬಗ್ಗೆ ಗೊತ್ತಿರುತ್ತದೆ ಎಂದು ಟಾಂಗ್ ನೀಡಿದ್ದಾರೆ.
ನೀವು ಬಯಲು ಮಾಡಲು ಇದು ಒಳ್ಳೆಯ ಸಮಯ ಅಂತ ಭಾವಿಸಿದ್ದರೆ ಅದನ್ನು ಕಾರ್ಯಗತಗೊಳಿಸಿ. ಪೊಲೀಸರ ಬಳಿಗೆ ಹೋಗಿ, ಅವರಿಗೆ ಪುರಾವೆ ನೀಡಿ ಮತ್ತು ಅವರ ಕೆಲಸವನ್ನು ಮಾಡಲು ಬಿಡಿ. ಇದರಿಂದಾಗಿ ಎನ್ಸಿಬಿಗೆ ಸಹಾಯವಾಗುತ್ತದ ನೀವು ಏನೇ ಮಾಡಿದರೂ, ಒಳ್ಳೆಯ ಉದ್ದೇಶದಿಂದ ಮಾಡಿ. ಪ್ರತೀಕಾರಕ್ಕಾಗಿ ಅಲ್ಲ. ಕೊನೆಯದಾಗಿ, ನೆನಪಿಡಿ, ಬದಲಾವಣೆಯು ನಮ್ಮಿಂದಲ್ಲೇ ಪ್ರಾರಂಭವಾಗಬೇಕು” ಎಂದು ತಿಳಿಸಿದ್ದಾರೆ.