ಚೆನ್ನೈ, ಸೆ.26: ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಚೆನ್ನೈನಲ್ಲಿ ಶನಿವಾರ ಮಧ್ಯಾಹ್ನ ನೆರವೇರಿದ್ದು, 72 ಗನ್ ಸೆಲ್ಯೂಟ್ ಮೂಲಕ ತಮಿಳುನಾಡಿನ ಪೊಲೀಸರು ಗೌರವ ಸಲ್ಲಿಸಿದರು.
ಎಸ್‌ಪಿಬಿ ಶುಕ್ರವಾರ ಮಧ್ಯಾಹ್ನ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಶುಕ್ರವಾರ ಸಂಜೆ ಎಸ್‌ಪಿಬಿ ಪಾರ್ಥಿವ ಶರೀರವನ್ನು ತಿರುವಳ್ಳೂರು ಜಿಲ್ಲೆಯ ತಮಾರೈಪಕ್ಕಂನಲ್ಲಿರುವ ಅವರ ತೋಟದ ಮನೆಗೆ ವ್ಯಾನ್‌ನಲ್ಲಿ ಕರೆದೊಯ್ಯಲಾಯಿತು. ದಾರಿಯುದ್ದಕ್ಕೂ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕುಟುಂಬ ಸದಸ್ಯರು ನುಂಗಂಬಕ್ಕಂ ನಿವಾಸದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಅಂತಿಮ ನಮನ ಸಲ್ಲಿಸಿದರು.
ಎಸ್‌ಪಿಬಿ ಅಂತ್ಯಕ್ರಿಯೆಯ ವಿಧಿವಿಧಾನವನ್ನು ಪುತ್ರ ಎಸ್.ಪಿ. ಚರಣ್ ನೆರವೇರಿಸಿದರು. ನಟರು, ರಾಜಕಾರಣಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.
ಇಂದು ಎಸ್ ಪಿ ಬಿ ಕಣ್ಮರೆಯಾದರೂ ಅವರ ಹಾಡುಗಳು, ಹಾಗೂ ಅವರು ಸುಮಧುರ ಸ್ವರವಾಗಿ, ಅಧ್ಬುತ ಗಾಯಕರಾಗಿ ನಮ್ಮ ನಿಮ್ಮ ಜೊತೆ ಜೊತೆಯಲ್ಲೇ ಶಾಶ್ವತವಾಗಿ ಇರುತ್ತಾರೆ. ಸಾವು ಸಹಜವಾದರೂ ಅವರ ಸ್ವರ ಅಜರಾಮರವಾಗಿದೆ..
ಇಂದು ಶನಿವಾರ (25-9-2020) ಸರಸ್ವತೀ ಪುತ್ರ ಕಲ್ಪವ್ರಕ್ಷಗಳ ನಡುವೆ ಸಂಗೀತಲೋಕದ ಯಜಮಾನ ಭೂಮಿತಾಯಿಯ ಮಡಿಲ್ಲಿ ವಿಲೀನರಾದರು. ಮುಂದಿನ ಜನ್ಮದಲ್ಲಿ ಕನ್ನಡಿಗನಾಗಿ ಹುಟ್ಟಿ ಬನ್ನಿ ಎಂಬುದು ಅವರ ಹಾಗೂ ಅನೇಕ ಅಭಿಮಾನೀ ಕನ್ನಡಿಗರ ಆಶಯ.