ಮಂಡ್ಯ: ಬಿಜೆಪಿ ಸರ್ಕಾರಗಳು ತಮ್ಮ ಬಂಡವಾಳಶಾಹಿ ಸ್ನೇಹಿತರಿಗೆ ಇಡೀ ಎಪಿಎಂಸಿ ವ್ಯವಸ್ಥೆಯನ್ನೇ ಅಡ ಇಡಲು ಹೊರಟಿವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಭೂ ಸುಧಾರಣಾ ತಿದ್ದುಪಡಿ ಮಸೂದೆ ಮೂಲಕ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟು, ರೈತರ ಭೂಮಿ ಕಸಿದುಕೊಂಡು ಬೀದಿಗೆ ತಳ್ಳಿ, ಲೂಟಿ ಹೊಡೆಯಲು ಹೊರಟಿದೆ.
ಇದೀಗ ಕನಿಷ್ಠ ಬೆಂಬಲ ಬೆಲೆಯನ್ನು ರದ್ದು ಮಾಡಿ ಕೆಲವೇ ಕೆಲವು ಕೈಗಾರಿಕೋದ್ಯಮಿಗಳಿಗೆ ಅನುಕೂಲ ಆಗುವಂತೆ ಕೆಲಸ ಮಾಡುತ್ತಿದೆ. ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಕಬ್ಬು ಬೆಳೆಗಾರರ ಬೆಂಬಲ ಬೆಲೆ ಹೆಚ್ಚಿಸಿತು. ಆದರೆ ಈಗಿನ ಸರ್ಕಾರ ರೈತರಿಗೆ ದ್ರೋಹ ಮಾಡುತ್ತಿದೆ ಎಂದು ದೂರಿದರು.
2014ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗ ಅವರು ಮೊದಲು ಆಕ್ರಮಣ ಮಾಡಿದ್ದೇ ರೈತರ ಮೇಲೆ. ಈ ತಿದ್ದುಪಡಿ ಕಾಯ್ದೆಗಳು ಅನುಷ್ಠಾನಕ್ಕೆ ಬಂದರೆ ರೈತರಿಗೆ ಮರಣ ಶಾಸನವಾಗಲಿವೆ. ಎಪಿಎಂಸಿ ತೆಗೆದು ಬಿಟ್ಟರೆ ಸಣ್ಣ ಕೃಷಿಕರು ಬೆಳೆಯನ್ನು ಯಾರಿಗೆ ಮಾರಾಟ ಮಾಡಬೇಕು? ಅವರಿಗೆ ಬೆಂಬಲ ಬೆಲೆಯ ಭರವಸೆ ಇದೆಯೇ? ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ರೈತರ ಮೇಲೆ ಆಕ್ರಮಣ ಮಾಡುತ್ತಿವೆ.
ನಮ್ಮ ದಿನ ನಿತ್ಯದ ಆಹಾರದ ಮೇಲೆ ಆಕ್ರಮಣ ಮಾಡಿದ್ದಾರೆ. ಜನರ ಜೀವನ, ಜೀವನೋಪಾಯದ ಮೇಲೆ ಪ್ರಹಾರ ಮಾಡಿ, ರೈತರ ಕತ್ತು ಹಿಸುಕುವಂತಹಾ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.