ಬಿಹಾರ: ಬಿಹಾರ ವಿಧಾನಸಭಾ ಚುನಾವಣಾ ಕಣದಿಂದ ದಿನದಿನಕ್ಕೆ ಹೊಸ ವಿಚಾರ ಹೊರ ಬರುತ್ತಿದ್ದುಆರ್‌ಜೆಡಿಯ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ವಿರುದ್ಧ ಪತ್ನಿ ಐಶ್ವರ್ಯ ರಾಯ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಐಶ್ವರ್ಯರವರ ತಂದೆ ಸ್ವತಃ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶದ ವೇಳೆ ಮಗಳ ರಾಜಕೀಯ ನಡೆ ಕುರಿತು ಹೇಳಿಕೆ ನೀಡಿದ್ದು, ತಮ್ಮ ಮಗಳು ತೇಜ್ ಪ್ರತಾಪ್ ವಿರುದ್ಧ ಸ್ಪರ್ಧಿಸಿದರೆ ತಾವೇ ಸ್ವತಃ ಮುಂದೆ ನಿಂತು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ.
ನನ್ನ ಮಗಳು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಯಾರಿದಂಲೂ ತಡೆಯಲು ಸಾಧ್ಯವಿಲ್ಲ, ಶೀಘ್ರದಲ್ಲೇ ಈ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತೇನೆ, ಮಗಳು ಯಾವ ಕ್ಷೇತ್ರದಿಂದ ಬೇಕಾದರೂ ಸ್ಪರ್ಧಿಸಬಹುದು ಎಂದು ಎಂದು ಚಂದ್ರಿಕಾ ರಾಯ್ ಹೇಳಿದ್ದಾರೆ.
ಪ್ರಸ್ತುತ ಮಾಹುವಾ ಕ್ಷೇತ್ರದಿಂದ ಶಾಸಕರಾಗಿರುವ ತೇಜ್ ಪ್ರತಾಪ್ ಯಾದವ್, 2018ರಲ್ಲಿ ಐಶ್ವರ್ಯಾರನ್ನು ಅವರನ್ನು ವಿವಾಹವಾಗಿದ್ದರು. ಆದರೆ, ವಿವಾಹವಾಗಿ ಕೇವಲ ಐದು ತಿಂಗಳ ನಂತರ ವಿಚ್ಛೇದನಕ್ಕೆ ತೇಜ್ ಪ್ರತಾಪ್ ಅರ್ಜಿ ಸಲ್ಲಿಸಿದ್ದರು. ಇದರಿಂದ ಎರಡು ಕುಟುಂಬಗಳ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿತ್ತು.
ಹೀಗಾಗಿ ತೇಜ್ ವಿರುದ್ಧ ಐಶ್ವರ್ಯಾ ಸ್ಪರ್ಧಿಸುವ ಸಾಧ್ಯತೆಯಿರುವುದು ನಿಖರವಾಗಿದೆ. 2015ರಲ್ಲಿ ತೇಜ್ ಪ್ರತಾಪ್ 28,000 ಮತಗಳ ಅಂತರದಿಂದ ಮಾಹುವಾದಿಂದ ಗೆದ್ದಿದ್ದರು. ಆದರೆ ಈ ಬಾರಿ ಮಹುವಾ ಬದಲು ಹಸನ್‌ಪುರ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.