ಬೆಂಗಳೂರು, ನ. 2020: ಇತ್ತೀಚೆಗೆ ಭಾರತ್ ಗ್ಯಾಸ್ ಖಾಸಗೀಕರಣಗೊಂಡಿತ್ತು. ಆದರೆ ಖಾಸಗೀಕರಣದ ನಂತರವೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ ಗ್ರಾಹಕರಿಗೆ (ಭಾರತ್ ಗ್ಯಾಸ್ ಮೂಲಕ ಸಿಲಿಂಡರ್ ಖರೀದಿಸುವವರು) ಎಲ್ ಪಿಜಿ ಸಬ್ಸಿಡಿ ಮುಂದುವರಿಯಲಿದೆ ಎಂದು ತೈಲ ಖಾತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರ ಹೇಳಿದ್ದಾರೆ.
“ಎಲ್ ಪಿಜಿ ಮೇಲಿನ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಖಾತೆಗೆ ನೇರವಾಗಿ ಪಾವತಿಸಲಾಗುತ್ತದೆ ಹಾಗೂ ಯಾವುದೇ ಕಂಪೆನಿಗಲ್ಲ. ಆದ್ದರಿಂದ ಎಲ್ ಪಿಜಿ ಮಾರಾಟ ಮಾಡುವ ಕಂಪೆನಿಯ ಮಾಲೀಕತ್ವ ಏನೇ ಆದರೂ ಯಾವ ಬದಲಾವಣೆಯೂ ಆಗಲ್ಲ,” ಎಂದು ಪ್ರಧಾನ್ ಪಿಟಿಐಗೆ ತಿಳಿಸಿದ್ದಾರೆ.
ಭಾರತದಲ್ಲಿ ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ ಹನ್ನೆರಡು ಎಲ್ ಪಿಜಿ ಸಿಲಿಂಡರ್ ಗಳು (14.2 Kg) ಸಬ್ಸಿಡಿ ದರದಲ್ಲಿ ಖರೀದಿಸಬಹುದು. ಹಾಗೆ ಖರೀದಿ ಮಾಡುವಾಗ ಪೂರ್ತಿ ಹಣವನ್ನು ನೀಡಬೇಕು. ಆ ನಂತರ ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಬಿಪಿಸಿಎಲ್ ನಲ್ಲಿನ ಸರ್ಕಾರದ ಪಾಲನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೊಸದಾಗಿ ಖರೀದಿ ಮಾಡುವ ಕಂಪೆನಿಗೆ ಭಾರತದ ತೈಲ ಸಂಸ್ಕರಣಾ ಸಾಮರ್ಥ್ಯದ 15.33% ಮತ್ತು ತೈಲ ಮಾರ್ಕೆಟಿಂಗ್ ನಲ್ಲಿ 22% ಪಾಲು ದೊರೆಯಲಿದೆ.
ಪ್ರಧಾನ್ ಈ ಬಗ್ಗೆ ಪ್ರಧಾನ್ ಅವರು ಮಾತನಾಡಿ, ಎಲ್ ಪಿಜಿ ಸಬ್ಸಿಡಿ ಪಾವತಿಯನ್ನು ಎಲ್ಲ ಗ್ರಾಹಕರಿಗೆ ಡಿಜಿಟಲ್ ಆಗಿ ಪಾವತಿಸಲಾಗುತ್ತದೆ ಎಂದಿದ್ದಾರೆ. “ಸಬ್ಸಿಡಿಯನ್ನು ನೇರವಾಗಿ ಗ್ರಾಹಕರಿಗೆ ಪಾವತಿಸುತ್ತದೆ. ಆದ್ದರಿಂದ ಅದನ್ನು ನಡೆಸುವುದು ಸರ್ಕಾರಿ ಸಂಸ್ಥೆಯೋ ಅಥವಾ ಖಾಸಗಿ ಸಂಸ್ಥೆಯೋ ಎಂಬುದು ಮುಖ್ಯವಲ್ಲ,” ಎಂದು ಪ್ರಧಾನ್ ತಿಳಿಸಿದ್ದಾರೆ. ಬಂಡವಾಳ ಹಿಂತೆಗೆತದ ಮುಂಚೆ ಹೇಗೆ ಸಬ್ಸಿಡಿ ಬರುತ್ತಿತ್ತೋ ಅದೇ ರೀತಿಯಲ್ಲೇ ನಂತರವೂ ದೊರೆಯುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.