ಚೆನ್ನೈ: ಪದ್ಮಶ್ರೀ, ಪದ್ಮಭೂಷಣ್, ಗಾನ ಗಾರುಡಿಗ, ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಚಿಂತಾಜನಕವಾಗಿದೆ. ಚೆನ್ನೈನ ಎಂಜಿಎಂ ಆಸ್ಪತ್ರೆ ಎಸ್‌ಪಿಬಿ ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಪ್ರಕಟಿಸಿದ ಹಿನ್ನೆಲೆಯಲ್ಲಿ ಇಂದು ತಮಿಳುನಾಡು ಆರೋಗ್ಯ ಸಚಿವ ವಿಜಯ್ ಭಾಸ್ಕರ್ ಆಸ್ಪತ್ರೆಗೆ ಭೇಟಿ ನೀಡಿ, ಗಾಯಕನ ಆರೋಗ್ಯ ವಿಚಾರಿಸಲಿದ್ದಾರೆ.
ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ.5ರಂದು ವೈದ್ಯರ ಸಲಹೆ ಮೇರೆಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶದ ತೊಂದರೆ ಹಾಗೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಎಸ್.ಪಿ.ಬಿ. ಅವರ ಆರೋಗ್ಯ ಇತ್ತೀಚೆಗಷ್ಟು ಸುಧಾರಿಸಿದೆ. ಶೀಘ್ರದಲ್ಲೇ ಅವರು ಗುಣಮುಖರಾಗಿ ಮನೆಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಗಾಯಕನ ಆರೋಗ್ಯ ಗಂಭೀರವಾಗಿದೆ ಎಂದು ಹೀಳಿದೆ
ಎಸ್.ಪಿ.ಬಿ. ಅವರ ಆರೋಗ್ಯ ಎರಡು ದಿನಗಳಿಂದ ಕ್ಷೀಣಿಸುತ್ತಿದ್ದು, ನುರಿತ ವೈದ್ಯರು ನಿಗಾ ವಹಿಸಿದ್ದಾರೆ ಎಂದು ಆಸ್ಪತ್ರೆ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ತಮಿಳುನಾಡು ಆರೋಗ್ಯ ಸಚಿವ ವಿಜಯ್ ಭಾಸ್ಕರ್ ಹಾಗೂ ಡಿಸಿಎಂ ಪಳನಿ ಸೆಲ್ವಂ ಎಂಜಿಎಂ ಆಸ್ಪತ್ರೆಗೆ ತೆರಳಿ, ಎಸ್.ಪಿ.ಬಿ. ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ.