ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಹಲವು ಮಸೂದೆಗಳನ್ನು ಅಂಗೀಕಾರ ಮಾಡಿರುವ ಕೇಂದ್ರ ಸರ್ಕಾರ ಇನ್ನು ಎಂಟು ದಿನಗಳು ಬಾಕಿಯಿರುವಾಗಲೇ ರಾಜ್ಯಸಭಾ ಕಲಾಪವನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ರಾಜ್ಯಸಭೆಯಲ್ಲಿ ಕಾರ್ಮಿಕ ಮಸೂದೆ, ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆಗೆ ಅಂಗೀಕರಿಸಿದ ಬಳಿಕ ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.
ಕಲಾಪದಿಂದ 8 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿರುವುದನ್ನು ಪ್ರಶ್ನಿಸಿ, ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲೇ ಒಂಭತ್ತು ಮಸೂದೆಗಳನ್ನು ಅನುಮೋದಿಸಿತ್ತು.
ಬುಧವಾರ ಐದು ಮಸೂದೆಗಳನ್ನು ಅನುಮೋದಿಸಿ ಬಳಿಕ ಕಲಾಪವನ್ನು ಮುಂದೂಡಿದೆ. ಸೆಪ್ಟೆಂಬರ್ 14 ರಂದು ಆರಂಭವಾದ ಮುಂಗಾರು ಅಧಿವೇಶನವು ಅಕ್ಟೋಬರ್ 1ಕ್ಕೆ ಅಂತ್ಯಗೊಳ್ಳಬೇಕಿದ್ದು ಆರಂಭದ ಬಳಿಕ ಲೋಕಸಭೆ ಹಾಗೂ ರಾಜ್ಯ ಸಭೆಗಳಲ್ಲಿ ಹಲವು ಮಸೂದೆಗಳನ್ನು ತರಾತುರಿಯಲ್ಲಿ ಅನುಮೋದಿಸಲಾಗಿದೆ. ಇದರಲ್ಲಿ ಹಲವು ಸುಗ್ರೀವಾಜ್ಞೆಗಳು ಕೂಡ ಒಳಗೊಂಡಿದೆ.