ಕಾಡಿಗೆಯಲ್ಲಡಗಿದೆ ಕಣ್ಣಿನ ಆರೋಗ್ಯ

ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅಂದದ ಕಣ್ಣುಗಳಿಗೆ ಕಪ್ಪು ಕಾಡಿಗೆ ಹಚ್ಚಿದರೆ, ಅದರ ಅಂದವೇ ಬೇರೆ.  ಈ ಕಾಡಿಗೆಯನ್ನು ಮಕ್ಕಳಿಗೆ ದ್ರಷ್ಠಿಯಾಗಬಾರದೆಂಬ ಕಾರಣಕ್ಕೂ  ಹಚ್ಚುತ್ತಾರೆ. ಹೆಣ್ಣಿನ ಸೌಂದರ್ಯವನ್ನು ವೃದ್ಧಿಸುವಲ್ಲೂ  ಕಾಡಿಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.  ಕಾಡಿಗೆಯನ್ನು ಅತಿ  ಸುಲಭವಾಗಿ ಮನೆಯಲ್ಲೇ   ತಯಾರಿಸುವ ವಿಧಾನ ಇಲ್ಲಿದೆ.

 ಒಂದು ಮಣ್ಣಿನ ಹಣತೆಯನ್ನು ತೆಗದುಕೊಂಡು ಅದರಲ್ಲಿ ನಿಮಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಎಳ್ಳೆಣ್ಣೆಯನ್ನು ಅಥವಾ ಹರಳೆಣ್ಣೆಯನ್ನು ತೆಗೆದುಕೊಳ್ಳಿ, ಹತ್ತಿಯಿಂದ ತಯಾರಿಸಿದ ಬತ್ತಿ ಹಾಕಿ ಉರಿಸಿ. ಆ ಹಣತೆಗೆ ಒಂದು ಶುದ್ದವಾದ ಮಣ್ಣಿನ ಪಾತ್ರೆ ಅಥವಾ ಸ್ಟೀಲ್ ಪಾತ್ರೆಯನ್ನು ಮುಚ್ಚಿ ಬಿಡಬೇಕು. ಬತ್ತಿ ಉರಿದು ಮುಗಿದ ಬಳಿಕ ಮುಚ್ಚಿಟ್ಟ ಪಾತ್ರೆಯನ್ನು ತೆಗೆದು ನೋಡಿದಾಗ ಅದರಲ್ಲಿ ಎಣ್ಣೆ ಉರಿದ ಮಸಿ( ಕರಿ) ಹಿಡಿದಿಟ್ಟುಕೊಂಡಿರುತ್ತದೆ. ಆ ಮಸಿಯನ್ನು(ಕರಿ) ತೆಗೆದುಕೊಂಡು ಅದಕ್ಕೆ ಸ್ವಲ್ಪ ಶುದ್ದ ದನದ ತುಪ್ಪವನ್ನು ಹಾಕಿ ಚೆನ್ನಾಗಿ ಗಟ್ಟಿಯಾಗಿ ಕಲಸಿಕೊಂಡರೆ ಕಾಡಿಗೆ ರೆಡಿ. ಇದನ್ನು ನಾವು ಮಕ್ಕಳಿಗೂ ದೊಡ್ಡವರಿಗೂ ಕಣ್ಣಿಗೆ ಹಚ್ಚಿಕೊಳ್ಳಬಹುದು.

ನಾವೇ ತಯಾರಿಸುವುದರಿಂದ ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಇದೆ ಎಂಬ ಸಂಶಯವಿರುವುದಿಲ್ಲ. ಇದರಲ್ಲಿಯೇ ಐಲೈನರನ್ನೂ ಮಾಡಬಹುದು ಸ್ವಲ್ಪ ತೆಳುವಾಗಿ ಕಲಸಿಕೊಂಡರೆ ಅದನ್ನು ಐಲೈನರಾಗಿ ಬಳಸಬಹುದು. ಮಾರ್ಕೆಟ್ ಗಳಲ್ಲಿ ದುಬಾರಿ ಬೆಲೆ ಕೊಟ್ಟು ಕೊಳ್ಳುವುದರ ಬದಲು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಕಣ್ಣಿನ ಅಂದಕ್ಕೆ ಮನೆಯಲ್ಲೇ ತಯಾರಿಸಿದ ಕಾಡಿಗೆಹಚ್ಚಿ ಸೌಂದರ್ಯ ಹೆಚ್ಚಿಸಿಕೊಳ್ಳಿ.

Exit mobile version