ಕೇಸು ದಾಖಲಿಸಿ ರಾಜಕಾರಣದ ಅಗತ್ಯವಿಲ್ಲ: ಸುಧಾಕರ್

ಬೆಂಗಳೂರು, .16: ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿನ ಅಭ್ಯರ್ಥಿ ಮುನಿರತ್ನ ಅವರು ಶಾಸಕರಾಗಿದ್ದ ಅವಧಿಯಲ್ಲಿ ಅವರು ಮಾಡಿರುವ ಸಾಧನೆಯೇ ಅವರಿಗೆ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ತಂದುಕೊಡಲಿದೆ. ಈಗಾಗಲೇ ಗೆಲುವು ಅವರದಾಗಿದೆ. ಹೀಗಿರುವಾಗ ಕೇಸು ದಾಖಲಿಸಿ ರಾಜಕಾರಣ ಮಾಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಪ್ರಥಮ ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ನನ್ನ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿದ್ದರು. ಮೂರು ವರ್ಷ ಅದರ ವಿರುದ್ಧ ಹೋರಾಟ ನಡೆಸಿದ್ದೆ. ಹೀಗಾಗಿ ದುರುದ್ದೇಶದಿಂದ  ಕೇಸು ದಾಖಲಿಸಲಾಗಿದೆ ಎಂಬ ಆರೋಪ ನನ್ನದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಮಾತಿನ ತಿರುಗುಬಾಣ ಬಿಟ್ಟಿದ್ದಾರೆ.

ಇಲ್ಲಿನ ಮತದಾರರು ಅಭಿವೃದ್ಧಿ ಪರವಾಗಿರುವ ಯಡಿಯೂರಪ್ಪನವರ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಬೆಂಬಲಿಸಲಿದ್ದಾರೆ. ನೂತನವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಕಾರಣಕ್ಕೆ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ನಮ್ಮ ವಿರುದ್ಧ ಜನರ ಮುಂದೆ ಪ್ರತಿಪಾದಿಸಲು ಯಾವುದೇ ವಿಷಯಗಳಿಲ್ಲ ಎಂದು ಹೇಳಿದರು.

ಚುನಾವಣೆ ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಪಾಲಿಕೆ ಚುನಾವಣೆಯಲ್ಲೂ ಪಕ್ಷ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

Exit mobile version