ಖರ್ಚು ಉಳಿಸಿಕೊಳ್ಳಲು ಸಿದ್ದರಾಮಯ್ಯ, ಡಿಕೆಶಿ ಕಚ್ಚಾಟ; ಸಚಿವ ಎಸ್ ಟಿ ಎಸ್

ಮೈಸೂರು, ನ. 09: ಕಾಂಗ್ರೆಸ್ ನವರು ಮೊದಲು ಅವರ ನಡುವಿನ ಗೊಂದಲ ಬಗೆಹರಿಸಿಕೊಳ್ಳಲಿ. ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಪ್ರಯತ್ನ ಪಡುತ್ತಿದ್ದರೆ, ಶಿವಕುಮಾರ್ ಅವರನ್ನು ಕೆಳಗಿಳಿಸಲು ಸಿದ್ದರಾಮಯ್ಯ ಅವರು ಪ್ರಯತ್ನ ಪಡುತ್ತಿದ್ದಾರೆ. ಇದನ್ನು ಮುಚ್ಚಿಕೊಳ್ಳಲು ಅವರು ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರಿಗೆ ಅವರ ಖುರ್ಚಿಯನ್ನು ಉಳಿಸಿಕೊಂಡರೆ ಸಾಕು. ಹಾಗಾಗಿ ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಚಿವರು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆಯೇ ಪರಸ್ಪರ ಉತ್ತಮ ಬಾಂಧವ್ಯ ಇಲ್ಲ. ಒಬ್ಬರಿಗೊಬ್ಬರು ಅಧಿಕಾರವನ್ನು ಕಿತ್ತುಕೊಳ್ಳಲು ಬಡಿದಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ರಾಜರಾಜೇಶ್ವರಿ ನಗರ , ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನೂರಕ್ಕೆ ನೂರು ಸ್ಪಷ್ಟ. ಮುನಿರತ್ನ ಅವರ ಪರ ಅಲೆ ಇರುವುದು ನಮಗೆ ಪ್ರಚಾರ ಸಂದರ್ಭದಲ್ಲಿಯೇ ಗೊತ್ತಾಗಿದೆ. ಶೇ.50ರಷ್ಟು ಮಂದಿ ಅವರ ಅಭಿವೃದ್ಧಿ ನೋಡಿ ಮತ ನೀಡಿದರೆ, ಇನ್ನು ಶೇ.50 ಮಂದಿ ಬಿಜೆಪಿ ಪಕ್ಷಕ್ಕಾಗಿ ಮತ ಚಲಾಯಿಸಿದ್ದಾರೆ. ಅಲ್ಲದೆ, ಎರಡೂ ಕಡೆ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು. ಅವರ ಸೋಲಿಗೆ ಅವರೇ ಕಾಯುತ್ತಿದ್ದಾರೆ

ಈಗ ನಡೆದಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆ ಸೇರಿದಂತೆ ನಾಲ್ಕು ವಿಧಾನಪರಿಷತ್ ಸ್ಥಾನಗಳಲ್ಲೂ ಕಾಂಗ್ರೆಸ್ ಸೋಲಬೇಕೆಂಬುದು ಅವರ ಪಕ್ಷಗಳ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣ ಕಾಯುತ್ತಿದೆ. ಕಾರಣ, ಸೋತ ಮೇಲೆ ಪರಸ್ಪರ ಒಬ್ಬರ ಮೇಲೊಬ್ಬರು ಸೋಲಿಗೆ ಕಾರಣೀಭೂತರು ಎಂದು ಆರೋಪಿಸಿ ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ಅವರ ಪಕ್ಷದಲ್ಲಿಯೇ ನಡೆಯುತ್ತಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Exit mobile version