ಗಣೇಶ ಚತುರ್ಥಿ ಆಚರಿಸಲು ಗ್ರೀನ್‌ ಸಿಗ್ನಲ್

ಬೆಂಗಳೂರು: ವ್ಯಾಪಕವಾಗಿ ಬೆಳೆಯುತ್ತಿರುವ ಕೊರೊನಾ ಭಯಕ್ಕೆ ಗಣೇಶ ಚತುರ್ಥಿಗೆ ಬ್ರೇಕ್‌ ಹಾಕಲು ಮುಂದಾಗಿದ್ದ ರಾಜ್ಯ ಸರಕಾರ ತನ್ನ ನಿರ್ಧಾರ ಬದಲಾಯಿಸಿದ್ದು. ಎಲ್ಲ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಹಬ್ಬವನ್ನು ಆಚರಿಸಲು ಅನುಮತಿ ನೀಡಿದೆ.

ಕೊರೋನಾದಿಂದಾಗಿ ಯಾವುದೇ ಜಾಗದಲ್ಲಿ ಜನರು ಗುಂಪು ಸೇರುವುದಕ್ಕೆ, ಸಭೆ-ಸಮಾರಂಭಗಳನ್ನು ನಡೆಸುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಈ ಕುರಿತು ಮಾರ್ಗ ಸೂಚಿ ರೂಪಿಸಿರುವ ಸರಕಾರ ವಾರ್ಡ್​ಗೆ ಒಂದು ಹಾಗೂ ಗ್ರಾಮಕ್ಕೆ ಒಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಿದೆ. ಈ ರೀತಿ ಪ್ರತಿಷ್ಠಾಪಿಸುವಂತೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಜನರ ಮನವೊಲಿಸಬೇಕು ಎಂದು ಎರಡನೇ ಪರಿಷ್ಕೃತ ಮಾರ್ಗಸೂಚಿಯಲ್ಲಿ ಸರ್ಕಾರ ಸೂಚಿಸಿದೆ.

ಇದರೊಂದಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದ್ದು, 20 ಜನರು ಮಾತ್ರ ಗಣೇಶ ಚತುರ್ಥಿ ಆಚರಣೆ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕೆ ಸ್ಥಳೀಯ ಆಡಳಿತದ ಪೂರ್ವ ಅನುಮತಿ ಪಡೆಯಬೇಕು. ಈ ಬಾರಿ ಗಣೇಶ ಚತುರ್ಥಿಯನ್ನು ಸರಳವಾಗಿ ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ, ತಮ್ಮ ಮನೆಗಳಲ್ಲಿ ಅಥವಾ ಸರಕಾರಿ, ಖಾಸಗಿ, ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಟ ಸಂಖ್ಯೆಯೊಂದಿಗೆ ಆಚರಿಸಬಹುದು.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕು.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಗಣೇಶೋತ್ಸವ ಮಂಡಳಿ ಅಥವಾ ಸಮಿತಿಗಳು ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಕಡ್ಡಾಯ. ಒಮ್ಮೆಲೆ 20 ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾದಿಗಳಿಗೆ ಅನುವು ಮಾಡಿಕೊಡಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ / ಸಂಗೀತ ನೃತ್ಯ ಇನ್ನಿತರ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ. ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಗಣೇಶ ಮೂರ್ತಿ ತರುವಾಗ ಅಥವಾ ವಿಸರ್ಜಿಸುವಾಗ ಯಾವುದೇ ಮೆರವಣಿಗೆ ಮಾಡುವಂತಿಲ್ಲ. ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

Exit mobile version