ನವದೆಹಲಿ, ಅ. 17: ವಿಶ್ವದಾದ್ಯಂತ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಗ್ರ್ಯಾಂಡ್ ಚಾಲೆಂಜಸ್ ವಾರ್ಷಿಕ ಸಭೆ 2020ರಲ್ಲಿ ಭಾಗಿಯಾಗಿ ಜಗತ್ತಿನ ಪ್ರಸಿದ್ಧ ವಿಜ್ಞಾನಿಗಳು ಮತ್ತು ಸಂಶೋಧಕರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಗ್ರ್ಯಾಂಡ್ ಚಾಲೆಂಜಸ್ ವಾರ್ಷಿಕ ಸಭೆಯು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಚರ್ಚೆಯನ್ನು ನಡೆಸುವ ವೇದಿಕೆ ಇದಾಗಿದ್ದು, ಪ್ರಧಾನಿ ಮಹತ್ವದ ಭಾಷಣ ಮಾಡಲಿದ್ದಾರೆ.
ನಾಳೆ ವಾರ್ಷಿಕ ಸಭೆ ಉದ್ಘಾಟನೆಗೊಳ್ಳಲಿದ್ದು, ಪ್ರಧಾನಿ ಮುಖ್ಯ ಭಾಷಣ ಮಾಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಕಚೇರಿಯಿಂದಲೇ ಅವರು ಮಾತನಾಡಲಿದ್ದಾರೆ. ಕಳೆದ 15 ವರ್ಷಗಳಿಂದ ಆರೋಗ್ಯ ಮತ್ತು ಅಭಿವೃದ್ಧಿಯಲ್ಲಿನ ದೊಡ್ಡ ಸವಾಲು ಎದುರಿಸಲು ಗ್ರ್ಯಾಂಡ್ ಚಾಲೆಂಜಸ್ ವಾರ್ಷಿಕ ಸಭೆ ಆಯೋಜನೆ ಮಾಡಲಾಗುತ್ತಿದೆ. ಇದರಲ್ಲಿ ವಿವಿಧ ದೇಶದ ನಾಯಕರು, ಪ್ರಖ್ಯಾತ ವಿಜ್ಞಾನಿಗಳು ಮತ್ತು ಸಂಶೋಧಕರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.