ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅಚ್ಯುತನ್ ನಂಬೂದರಿ ಇನ್ನಿಲ್ಲ

ಪಾಲಕ್ಕಾಡ್, ಅ.15: ಪ್ರಶಸ್ತಿ ವಿಜೇತ ಅಕ್ಕಿಥಮ್ ಅಚ್ಯುತನ್ ನಂಬೂದರಿ (94) ವಯೋಸಹಜ ಕಾಯಿಲೆಗಳಿಂದಾಗಿ ಬಳಲುತ್ತಿದ್ದ ತ್ರಿಶೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಮಲಯಾಳಂ ಸಾಹಿತ್ಯದ ಸರಳತೆಯ ಮೇರು ಶಿಖರ ಎಂದೇ ಪ್ರಖ್ಯಾತಿ ಪಡೆದಿರುವ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದರು.

ಸರಳ ಮತ್ತು ಸ್ಪಷ್ಟವಾದ ಬರವಣಿಗೆಗೆ ಹೆಸರುವಾಸಿಯಾದ ಮಲಯಾಳಂನ ಕವಿ ಮತ್ತು ಪ್ರಬಂಧಕಾರ ಅಕ್ಕಿಥಮ್ ಅವರಿಗೆ 2019 ರ ಸಾಲಿನ ಜ್ಞಾನಪೀಠ ಪ್ರಶಸ್ತಿ ಒಲಿದಿತ್ತು. ಸೆಪ್ಟೆಂಬರ್ 24 ರಂದು ಕೇರಳದ ಪಾಲಕ್ಕಾಡ್ ನಲ್ಲಿರುವ ಕುಮಾರನಲ್ಲೂರು ಅವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು. ಕೇರಳ ಸರಕಾರದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ‘ಎಳಥುಚಾನ್ ಪ್ರಶಸ್ತಿ, ಭಾರತ ಸರ್ಕಾರದ “ಪದ್ಮಶ್ರೀ” ಪುರಸ್ಕಾರ ಅವರಿಗೆ ಸಂದಿದೆ. ಅಕ್ಕಿಥಮ್ ಅವರು ‘ಕೇರಳ ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ, ‘ಒಡಕ್ಕುಳಾಲ್’ ಪ್ರಶಸ್ತಿ, ‘ವಲ್ಲಥೋ’ ಪ್ರಶಸ್ತಿ, ‘ವಯಲಾರ್’ ಪ್ರಶಸ್ತಿ, ‘ಆಸಾನ್’ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅಕ್ಕಿಥಮ್ ಅವರ ಪತ್ನಿ 2019 ರಲ್ಲಿ ನಿಧನರಾಗಿದ್ದು, ಪುರಸ್ಕೃತರು ಪುತ್ರ ಹಾಗೂ ಪುತ್ರಿಯರನ್ನು ಅಗಲಿದ್ದಾರೆ. ವಯೋಸಹಜ ಕಾಯಿಲೆಯಿಂದಾಗಿ ಮಲಯಾಳಂನ ಪ್ರಸಿದ್ಧ ಸಾಹಿತ್ಯ ಪ್ರತಿಭೆಯಾಗಿದ್ದ ಅಕ್ಕಿಥಮ್ ಅವರು ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮರಣವನ್ನು ಹೊಂದಿದ್ದಾರೆ.

Exit mobile version