ತೀರ್ಪುಗಾರರಿಗೆ ಚೆಂಡಿನಿಂದ ಹೊಡೆದ ನೊವಾಕ್‌

ಪಂದ್ಯದ ವೇಳೆ ಲೈನ್ ತೀರ್ಪುಗಾರರೊಬ್ಬರಿಗೆ ಚೆಂಡಿನಿಂದ ಹೊಡೆದ ಕಾರಣಕ್ಕೆ ವಿಶ್ವದ ಅಗ್ರ ಶ್ರೇಯಾಂಕಿತ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್, ಯುಎಸ್ ಓಪನ್ ಟೂರ್ನಿಯಿಂದ ಅನರ್ಹಗೊಂಡಿದ್ದಾರೆ.

ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದ 16ನೇ ಸುತ್ತಿನ ಪಂದ್ಯದ ವೇಳೆ ಆಟಗಾರನಿಗೆ ಸರಿಹೊಂದದ ವರ್ತನೆ ತೋರಿದ ನೊವಾಕ್ ಜೊಕೊವಿಕ್, ಆಕಸ್ಮಿಕವಾಗಿ ಲೈನ್ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಗೆ ಚೆಂಡಿನಿಂದ ಹೊಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಜೊಕೊವಿಕ್ ಅವರನ್ನು ಅನರ್ಹಗೊಳಿಸುವ ಮೂಲಕ, ಎದುರಾಳಿ ಆಟಗಾರ ಸ್ಪೇನ್ ದೇಶದ ಪಬ್ಲೋ ಕರ್ರೆನೊ ಬುಸ್ಟಾ ಅವರನ್ನು ಪಂದ್ಯದ ವಿಜೇತ ಆಟಗಾರ ಎಂದು ಘೋಷಿಸಲಾಯಿತು.

ಈ ವೇಳೆ ತಮ್ಮ ತಪ್ಪನ್ನು ಅರಿತ ಜೊಕೊವಿಕ್ ಕೂಡಲೇ ಮಹಿಳಾ ಅಂಪೈರ್ ಬಳಿಗೆ ತೆರಳಿ ಕ್ಷಮೆ ಕೋರಿದ್ದಾರೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ತೀರ್ಪುಗಾರರು ಜೊಕೊವಿಕ್ ಅವರನ್ನು ಟೂರ್ನಿಯಿಂದ ಅನರ್ಹಗೊಳಿಸಿದ್ದಾರೆ. ಈ ಘಟನೆ ಕುರಿತು ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಸೆರ್ಬಿಯಾ ಆಟಗಾರ ಜೊಕೊವಿಕ್, ಘಟನೆ ಬಗ್ಗೆ ಕ್ಷಮೆಯಾಚಿಸುವ ಜೊತೆಗೆ ಈ ಘಟನೆಯಿಂದ ಪಾಠ ಕಲಿತು ಮುನ್ನಡೆಯುವುದಾಗಿ ಬರೆದುಕೊಂಡಿದ್ದಾರೆ.

Exit mobile version