ಮೈಸೂರು, ಅ. 28: ನಾಡಹಬ್ಬ ದಸರಾ ಸಂಭ್ರಮದಲ್ಲಿ ಪಾಲ್ಗೊಂಡು ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ಮುಗಿಸಿದ ಅಭಿಮನ್ಯು ಸಾರಥ್ಯ ಗಜಪಡೆ ಬುಧವಾರ ನಾಡಿನಿಂದ ಕಾಡಿನತ್ತ ಹೊರಟವು. ದಸರಾ ಮಹೋತ್ಸವದ ಅಂಗವಾಗಿ ಮೈಸೂರಿಗೆ ಆಗಮಿಸಿ ಜಂಬೂಸವಾರಿಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದ ಗಜಪಡೆಗೆ ಜಿಲ್ಲಾಡಳಿತದಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ದಸರಾ ಗಜಪಡೆ ಹೊರಡುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅಭಿಮನ್ಯು, ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳಿಗೆ ಪೂಜೆ ನೆರವೇರಿಸಲಾಯಿತು. ಬಳಿಕ ಲಾರಿಗಳನ್ನೇರಿ ಆನೆ ಶಿಬಿರಗಳತ್ತ ತೆರಳಲಿರುವ ದಸರಾ ಗಜಪಡೆ. ಪ್ರತಿವರ್ಷದಂತೆ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿಯೂ ಸಂಭ್ರಮದಿಂದ ಪಾಲ್ಗೊಂಡಿದ್ದವು. ಕೊರೊನಾ ಕಾರಣಕ್ಕೆ ಅರಮನೆ ಆವರಣದಲ್ಲೇ ದಸರಾ ಆನೆಗಳು ತಾಲೀಮು ನಡೆಸಿದ್ದವು.