ನಿರ್ಬಂಧದ ನಡುವೆಯೂ ಚಾಮುಂಡಿಬೆಟ್ಟಕ್ಕೆ ಭೇಟಿ: ನಟ ದರ್ಶನ್, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ದಾವೆ

ಮೈಸೂರು: ಕೊರೊನಾ ಲಾಕ್‍ಡೌನ್‍ ಮಾರ್ಗಸೂಚಿ ಉಲ್ಲಂಘಿಸಿ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ನಟ ದರ್ಶನ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ವಕೀಲರೊಬ್ಬರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಆಷಾಢ ಶುಕ್ರವಾರದಂದು ಸಾರ್ವಜನಿಕರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವುದಕ್ಕೆ ಸ್ಥಳೀಯ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಆದರೆ ಜಿಲ್ಲಾಡಳಿತದ ಆದೇಶದ ನಡುವೆಯೂ ಚಾಲೆಂಜಿಂಗ್‍ ಸ್ಟಾರ್ ನಟ ದರ್ಶನ್ 3ನೇ ಆಷಾಢ ಶುಕ್ರವಾರದಂದು ಬೆಟ್ಟಕ್ಕೆ ಭೇಟಿ ನೀಡಿದ್ದರು. ಇದೇ ರೀತಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕೂಡ 4ನೇ ಶುಕ್ರವಾರದಂದು ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿದ್ದರು.

ನಟ ದರ್ಶನ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಸಹ ಜಿಲ್ಲಾಡಳಿತದ ನಿರ್ಬಂಧವಿದ್ದರೂ ಬೆಟ್ಟಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದ್ದರು. ಆದರೆ ಇವರುಗಳು ನಡೆದುಕೊಂಡ ರೀತಿಗೆ ಸಾರ್ವಜನಿಕರಿಂದ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿತ್ತು. ಈ ನಡುವೆ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಜಿಲ್ಲಾಡಳಿತದ ಮಾರ್ಗಸೂಚಿ ಉಲ್ಲಂಘನೆ ಮಾಡಿರುವುದು ಸರಿಯಲ್ಲ ಎಂದು ವಕೀಲೆ ಗೀತಾಮಿಶ್ರಾ ಹೈಕೋರ್ಟ್ ಹೆಚ್ಚುವರಿ ರಿಜಿಸ್ಟರ್ಗೆ ಜ್ಞಾನಪನ ಪತ್ರ ಸಲ್ಲಿಸಿದ್ದಾರೆ. ಜೊತೆಗೆ ಕೊವೀಡ್ 19 ಮಾರ್ಗಸೂಚಿಗಳ ಉಲ್ಲಂಘನೆ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಹ ಹಾಕಿದ್ದಾರೆ.

Exit mobile version