ಪುನೀತ್ ರಾಜ್ಕುಮಾರ್ ( Punith Rajkumar) ಅಗಲಿಕೆ ಇಡೀ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ. ಅವರ ಅಪಾರ ಅಭಿಮಾನಿಗಳಿಗೆ ನೋವು ತಂದಿದೆ. ಈಗ ಪುನೀತ್ ಹೆಸರಲ್ಲೇ ‘ಪುನೀತ ನಮನ’ ಕಾರ್ಯಕ್ರಮ ನಡೆಯುತ್ತಿದೆ. ರಾಜ್ ಕುಟುಂಬದ ಸದಸ್ಯರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಕುಟುಂಬದವರು ‘ಪುನೀತ ನಮನ’ಕ್ಕೆ ಬಂದಿದ್ದಾರೆ. ಪುನೀತ್ ಪತ್ನಿ ಅಶ್ವಿನಿ ಅವರ ನೋವು ಇನ್ನೂ ಕಡಿಮೆ ಆಗಿಲ್ಲ. 20 ದಿನ ಕಳೆದರೂ ಅವರ ಕಣ್ಣೀರು ನಿಂತಿಲ್ಲ. ಇಂದಿನ ಕಾರ್ಯಕ್ರಮದಲ್ಲೂ ಅವರು ಕಣ್ಣೀರು ಹಾಕಿದರು.
ಪುನೀತ್ ನಮನ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಆಹ್ವಾನ ಇಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕಾರಣಿಗಳು, ಸ್ಯಾಂಡಲ್ವುಡ್ನ ನೂರಾರು ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್ನಲ್ಲಿ ‘ಪುನೀತ ನಮನ’ ಕಾರ್ಯಕ್ರಮ ನಡೆಯುತ್ತಿದೆ.
ಪುನೀತ ನಮನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ಗೆ ಬ್ರೇಕ್ ಹಾಕಲಾಗಿದೆ. ಚಿತ್ರಪ್ರದರ್ಶನ ಹೊರತುಪಡಿಸಿ ಯಾವ ಸಿನಿಮಾ ಕೆಲಸಗಳು ನಡೆಯುವುದಿಲ್ಲ. ಕಾರ್ಯಕ್ರಮಕ್ಕೆ ಎಲ್ಲರೂ ಬರಲಿ ಅನ್ನೋ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ. ಪುನೀತ ನಮನದಲ್ಲಿ ಮನರಂಜನೆಗೆ ಯಾವುದೇ ಅವಕಾಶ ಇಲ್ಲದೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಆರಂಭಗೊಂಡು ಸಂಜೆ ಆರು ಗಂಟೆಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.