ಬಾರ್ಕ್‌ ಮೂರು ತಿಂಗಳ ಕಾಲ ಟಿಆರ್‌ಪಿ ನೀಡುವುದಿಲ್ಲ

ನವದೆಹಲಿ, ಅ. 15: ಟಿಆರ್‌ಪಿ ಹಗರಣ ಸಂಬಂಧಿಸಿದಂತೆಟಿವಿ ವಾಹಿನಿಗಳ ರೇಟಿಂಗ್ಸ್‌ನಲ್ಲಿ ಹಗರಣ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುದ್ದಿ ವಾಹಿನಿಗಳ ರೇಟಿಂಗ್ಸ್‌ನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಲು ರೇಟಿಂಗ್ಸ್‌‌ ನೀಡುವ ಸಂಸ್ಥೆ ಬಾರ್ಕ್‌ (ಬಿಎಆರ್‌ಸಿ – ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌) ನಿರ್ಧರಿಸಿದೆ. ತನ್ನ ವ್ಯವಸ್ಥೆಯನ್ನು ಮರುಪರಿಶೀಲನೆ ನಡೆಸುವ ಸಲುವಾಗಿ ಬಾರ್ಕ್‌ ಪ್ರತಿವಾರ ನೀಡುತ್ತಿದ್ದ ಟಿವಿ ರೇಟಿಂಗ್‌ ಪಾಯಿಂಟ್ಸ್‌ನ್ನು ಮೂರು ತಿಂಗಳ ಕಾಲ ತಡೆ ಹಿಡಿಯಲು ನಿರ್ಧರಿಸಿದೆ. ಎಲ್ಲಾ ಇಂಗ್ಲೀಷ್‌, ಹಿಂದಿ, ಸ್ಥಳೀಯ ಮತ್ತು ವಾಣಿಜ್ಯ ಸುದ್ದಿ ವಾಹಿನಿಗಳ ರೇಟಿಂಗ್ಸ್‌ನ್ನು ಸ್ಥಗಿತಗೊಳಿಸುವ ಕ್ರಮವನ್ನು ಕೈಗೊಂಡಿದೆ.

ರೇಟಿಂಗ್ ವಿವಾದದ ನಂತರ ರೇಟಿಂಗ್ ಅಳೆಯುವ ಮಾಪಕಗಳನ್ನು ಪ್ರಸ್ತುತ ತಾಂತ್ರಿಕ ಸಮಿತಿಯು ಪರಿಶೀಲಿಸುತ್ತಿದೆ. ಡೇಟಾದ ಗುಣಮಟ್ಟವನ್ನು ಸುಧಾರಿಸಲಾಗುತ್ತದೆ. ಎಲ್ಲಾ ರಾಷ್ಟ್ರೀಯ, ಪ್ರಾದೇಶಿಕ ಮತ್ತು ವ್ಯವಹಾರ ಸುದ್ದಿ ಚಾನೆಲ್‌ಗಳ ರೇಟಿಂಗ್ ಪ್ರಕ್ರಿಯೆಯ ಪರಿಶೀಲನೆಗೆ  8-12 ವಾರ ಬೇಕಾಗುತ್ತದೆ ಬಾರ್ಕ್ ಸಂಸ್ಥೆ ತಿಳಿಸಿದೆ.

ಬಾರ್ಕ್ ಹಿಂದಿ, ಇಂಗ್ಲೀಷ್, ಪ್ರಾದೇಶಿಕ ಮತ್ತು ವಾಣಿಜ್ಯ ಸುದ್ದಿ ಚಾನೆಲ್ ಗಳ ರೇಟಿಂಗ್ ಬಿಡುಗಡೆ ಮಾಡುವುದಿಲ್ಲ. ಆದರೆ ರಾಜ್ಯ ಹಾಗೂ ಭಾಷಾ ಸುದ್ದಿ ಚಾನೆಲ್ ಗಳ ಒಟ್ಟಾರೆ ಅಂಕಿಅಂಶವನ್ನು ಬಿಡುಗಡೆ ಮಾಡಲಿದೆ. ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್, ಬಾರ್ಕ್ನ ಈ ನಿರ್ಧಾರವನ್ನು ಸ್ವಾಗತಿಸಿದೆ.

ರೇಟಿಂಗ್ಸ್‌ಗಳನ್ನು ತಿರುಚಿ ಜಾಹೀರಾತು ಆದಾಯ ಸಂಗ್ರಹಿಸಿದ ಆರೋಪ ಸಂಬಂಧ ರಿಪಬ್ಲಿಕ್‌ ಟಿವಿ ಹಾಗೂ ಮಹಾರಾಷ್ಟ್ರ ಫಕ್ತ್‌ ಮರಾಠಿ ಮತ್ತು ಬಾಕ್ಸ್‌ ಸಿನಿಮಾಗಳ ವಿರುದ್ಧ ತನಿಖೆ ನಡೆಯುತ್ತಿದೆ. ಮಹಾರಾಷ್ಟ್ರ ವಾಹಿನಿಗಳ ಮಾಲಿಕರನ್ನು ಬಂಧಿಸಲಾಗಿದ್ದು, ರಿಪಬ್ಲಿಕ್‌ ಟಿವಿಯ ಉನ್ನತ ಅಧಿಕಾರಿಗಳನ್ನು ಮುಂಬಯಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Exit mobile version