ಬೆಳೆ ಸರ್ವೆಗೆ ಬೆಳೆ ದರ್ಶಕ್ ಆ್ಯಪ್

ದೊಡ್ಡಬಳ್ಳಾಪುರ, ನ. 11: ರೈತರಿಗೆ ತಮ್ಮ ಜಮೀನಿನ ಬೆಳೆಯನ್ನು ಸರ್ವೇ ಮಾಡುವುದು ಇನ್ನು ಸುಲಭವಾಗಿದೆ. ಈ ನಿಟ್ಟಿನಲ್ಲಿ ‘ಬೆಳೆ ದರ್ಶಕ್‌’ ಆಪ್‌ ಮೂಲಕ ರೈತರು ತಮ್ಮ ಜಮೀನಿನಲ್ಲಿ ಬೆಳೆಯಲಾಗಿರುವ ಬೆಳೆಗಳ ವಿವರ ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ. ಆದ್ದರಿಂದ ಇನ್ನು ಮುಂದೆ ಬೆಳೆ ಆಪ್‌ ಮೂಲಕ ಬೆಳೆ ಸರ್ವೇಯನ್ನು ಸ್ವಯಂ ರೈತರೇ ಮಾಡಿಕೊಳ್ಳಬಹುದಾಗಿದೆ.

ಇತ್ತೀಚೆಗಷ್ಟೆ ಬೆಳೆ ಸಮೀಕ್ಷೆ ಕಾರ್ಯ ಮುಕ್ತಾಯವಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ವಿವಿಧ ಬೆಳೆಗಳ ಸಮೀಕ್ಷೆಯನ್ನು ಮೊಬೈಲ್‌ ಆಪ್‌ ಮೂಲಕ ರೈತರೆ ಸ್ವಯಂ ಮಾಡಿಕೊಳ್ಳುವಂತೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ, ಬೆಳೆ ಸಮೀಕ್ಷೆ ಮಾಡದೆ ಇನ್ನು ಬಾಕಿ ಉಳಿದಿದ್ದ ಜಮೀನುಗಳಿಗೆ ಸರ್ಕಾರ ನೇಮಿಸಿದ್ದ ಸಮೀಕ್ಷೆದಾರರು ಭೇಟಿ ನೀಡಿ ಸಮೀಕ್ಷೆ ನಡೆಸಿ ಬೆಳೆ ಪೋಟೊ, ಬೆಳೆ ವಿವರ, ವಿಸ್ತೀರ್ಣವನ್ನು ಅಪ್‌ಲೋಡ್‌ ಮಾಡಿದ್ದಾರೆ.

ಸರ್ಕಾರ ಈಗ ಬಿಡುಗಡೆ ಮಾಡಿರುವ ‘ಬೆಳೆ ದರ್ಶಕ್‌’ ಆಪ್‌ನಲ್ಲಿ ಬೆಳೆ ಸಮೀಕ್ಷೆ ಸಂದರ್ಭದಲ್ಲಿ ರೈತರು ನಮೂದಿಸಿರುವ ಬೆಳೆಗಳ ವಿವರ, ವಿಸ್ತೀರ್ಣದ ಮಾಹಿತಿ ಪರಿಶೀಲಿಸಲು ಹಾಗೂ ಸಮೀಕ್ಷೆ ತಪ್ಪಾಗಿದ್ದರೆ ಆಕ್ಷೇಪಣೆ ಸಹ ಆಪ್‌ ಮೂಲಕವೇ ಸಲ್ಲಿಸಲು ನ.15ರವರೆಗೆ ಅವಕಾಶ ಇದೆ.

ನೀಲಗಿರಿ ಮರಗಳ ತೆರವಿನ ನಂತರ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರಾಗಿ, ಜೋಳವನ್ನೇ ಬೆಳೆದಿದ್ದಾರೆ. ಹೀಗಾಗಿ ತಮ್ಮ ಜಮೀನಿನಲ್ಲಿ ಬೆಳೆಯಲಾಗಿರುವ ಬೆಳೆ ಪಹಣಿಯಲ್ಲಿ ದಾಖಲಾಗಲು ಅನುಮೋದನೆಗೊಂಡಿದೆಯೇ ಎನ್ನುವುದನ್ನು ಈಗಲೇ ಪರಿಶೀಲಿಸಿಕೊಂಡು ಆಕ್ಷೇಪಣೆ ಸಲ್ಲಿಸಬೇಕು. ಇಲ್ಲವಾದರೆ 2019ನೇ ಸಾಲಿನಲ್ಲಿ ಬೆಳೆದ ರಾಗಿ ಖರೀದಿಸುವಾಗ ಹಲವು ಜನ ರೈತರ ಪಹಣಿಯಲ್ಲಿ ಬೆಳೆ ದಾಖಲಾಗದೆ ಇದ್ದುದ್ದನ್ನೇ ನೆಪಮಾಡಿಕೊಂಡು ಅಧಿಕಾರಿಗಳು ರಾಗಿ ಖರೀದಿ ಮಾಡದೇ ನಿರಾಕರಿಸಿದರು. ಇದೇ ತಪ್ಪನ್ನು ಈ ಬಾರಿಯೂ ಆಗದಂತೆ ರೈತರು ‘ಬೆಳೆ ದರ್ಶಕ್‌’ ಮೂಲಕ ಪರಿಶೀಲಿಸಿಕೊಂಡು ಆಕ್ಷೇಪ ಸಲ್ಲಿಬೇಕು. ಹಾಗೆಯೇ ಕೃಷಿ ಇಲಾಖೆಗೆ ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪುಸ್ತಕದ ನಕಲು ಪ್ರತಿ ಸಲ್ಲಿಸಿ ‘ಫ್ರೂಟ್‌’ ಐಡಿಯನ್ನು ಪಡೆಯಬೇಕು ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಬೆಳೆ ದರ್ಶಕ್‌ ಆಯಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

Exit mobile version