ಬೊಮ್ಮಾಯಿಗೆ ಕರೆ ಮಾಡಿ ಮಳೆ ಹಾನಿಯ ಬಗ್ಗೆ ಮಾಹಿತಿ ಪಡೆದ ಮೋದಿ

ಬೆಂಗಳೂರು ನ 23 :  ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರಿಗೆ ದೂರವಾಣಿ ಕರೆ ಮಾಡಿ ರಾಜ್ಯದ ಮಳೆ ಹಾನಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಅಕಾಲಿಕ ಮಳೆಯಿಂದಾದ ಬೆಳೆ ಹಾನಿಯ ಬಗ್ಗೆ ಸಂಪೂರ್ಣ ವಿವರ ಪಡೆದಿರುವ ಪ್ರಧಾನಿ ಸಮಗ್ರ ಅಧ್ಯಯನ ಮಾಡಿ ವಿವರ ಕಳಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಬೆಂಗಳೂರಿನ ಯಲಹಂಕ ಮಳೆ ಹಾನಿ ಪ್ರದೇಶದ ಬಗ್ಗೆಯೂ ಸಹ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಾರಿ ಸುರಿದ ಅಕಾಲಿಕ ಮಳೆಯಂದ ರಾಜ್ಯದಲ್ಲಿ 5ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಭತ್ತ, ರಾಗಿ, ಜೋಳ, ಉದ್ದು, ಅವರೆ, ತೊಗರಿ, ತೆಂಗು, ಬಾಳೆ, ಕಾಫಿ, ಏಲಕ್ಕಿ, ಮೆಣಸು ಬೆಳೆಗಳು ನಾಶವಾಗಿದೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರೈತರ ಬದುಕು ಬೀದಿಪಾಲಾಗಿದೆ. ಈಗಾಗಲೇ ಪ್ರಧಾನಿಯವರು ರಾಜ್ಯದ ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದರೆ ಕೊಟ್ಟ ಮಾಹಿತಿಯಂತೆ ಪರಿಹಾರ ನೀಡುತ್ತಾರಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ಈ ವರ್ಷದ ಮೊದಲ ಪ್ರವಾಹದಿಂದ 50ಸಾವಿರ ಕೋಟಿ ನಷ್ಟವಾಗಿತ್ತು. ರಾಜ್ಯ ಸರ್ಕಾರ 33ಸಾವಿರ ಕೋಟಿ ಪರಿಹಾರಕ್ಕೆ ಶಿಫಾರಸು ಮಾಡಿತ್ತು. ಎರಡನೇ ಭಾರಿ ಪ್ರವಾಹದಿಂದ 7೦೦೦ ಕೋಟಿ ನಷ್ಟವಾಗಿತ್ತು. ಆಗಲೂ ಸರ್ಕಾರ 45೦೦ ಕೋಟಿ ಪರಿಹಾರಕ್ಕೆ ಮನವಿ ಮಾಡಿತ್ತು. ಮೊದಲ ಪರಿಹಾರವಾಗಿ 1880 ಕೋಟಿ ಬಿಡುಗಡೆ ಮಾಡಿತ್ತು. ಎರಡನೇ ಬಾರಿ 740 ಕೋಟಿ ಬಿಡುಗಡೆ. ನಂತರ 384ಕೋಟಿ ನೆರವು ಕೇಂದ್ರದಿಂದ ಬಿಡುಗಡೆ. ಆದರೆ ಉಳಿದ ಪರಿಹಾರದ ಹಣ ಇಲ್ಲಿಯವರೆಗೆ ತಲುಪಿಲ್ಲ.

ಎರಡು ಬಾರಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೇಂದ್ರಕ್ಕೆ ಪತ್ರ ಬರೆದ್ದರು. ಆಗಲೂ ಬಾಕಿ‌ ಪರಿಹಾರದ ಹಣ ಬರಲೇ ಇಲ್ಲ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಮೂರು ಬಾರಿ ದೆಹಲಿಗೆ ಭೇಟಿ ನೀಡಿದ್ದರು. ಪ್ರಧಾನಿ, ಕೃಷಿ ಸಚಿವರು, ಗೃಹ ಸಚಿವರು, ನೀರಾವರಿ ಸಚಿವರನ್ನ ಭೇಟಿ ಮಾಡಿದ್ದಾರೆ. ಆದರೂ ಹಳೆಯ ನೆರವಿನ ಸಂಪೂರ್ಣ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಈ ಬಾರಿಯಾದರೂ ಕೇಂದ್ರ ಸೂಕ್ತ ಪರಿಹಾರ ಹಣ ಬಿಡುಗಡೆ ಮಾಡುತ್ತದೆಯಾ ಎಂದು ಕಾದು ನೋಡಬೇಕಿದೆ.

Exit mobile version