ಭದ್ರಾ ನದಿಗೆ 8251 ಕ್ಯೂಸೆಕ್ಸ್ ನೀರು ಬಿಡುಗಡೆ

ಶಿವಮೊಗ್ಗ, ಅಕ್ಟೋಬರ್ 15: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವಂತೆಯೇ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿಯೂ ವರ್ಷಧಾರೆಯ ಆರ್ಭಟ ಹೆಚ್ಚಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಭದ್ರೆಯೂ ಮೈದುಂಬಿ ಹರಿಯುತ್ತಿದ್ದು, ಜಲಾಶಯ 186 ಅಡಿಗಳ ಪೂರ್ಣ ಮಟ್ಟದಲ್ಲಿ ಭರ್ತಿಯಾಗಿದೆ. ಈ ಕಾರಣದಿಂದಾಗಿ ಇಂದು ಮುಂಜಾನೆ 6 ಗಂಟೆಗೆ ಕ್ರಸ್ಟ್ ಗೇಟ್ ಮೂಲಕ ನದಿಗೆ 8251 ಕ್ಯೂಸೆಕ್ಸ್ ನೀರನ್ನು ಭದ್ರಾ ನದಿಗೆ ಬಿಡುಗಡೆ ಮಾಡಲಾಗಿದೆ

ಇಂದು ಮುಂಜಾನೆಯ ಮಾಹಿತಿಯಂತೆ 14,304 ಕ್ಯೂಸೆಕ್ಸ್ ನೀರಿನ ಒಳಹರಿವಿದ್ದು, ಮಳೆ ಮತ್ತೆ ಮುಂದುವರೆದರೆ ಒಳಹರಿವು ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ಬಾಳೆಹೊನ್ನೂರು ವ್ಯಾಪ್ತಿಯಿಂದ 15,092 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದ್ದು, ಇದೂ ಕೂಡ ಭದ್ರಾ ಮುಖ್ಯ ಜಲಾಶಯಕ್ಕೆ ಹರಿದುಬರುವ ಹಿನ್ನೆಲೆಯಲ್ಲಿ ಆಣೆಕಟ್ಟಿನಿಂದ ಮತ್ತಷ್ಟು ನೀರನ್ನು ಹರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಕಂಗಾಲಾಗಿದ್ದು, ಜಿಲ್ಲೆಯಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಇನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ಹಾಗೂ ಚಿಕ್ಕಮಗಳೂರಿನ ಕೆಲ ಭಾಗಗಳಲ್ಲಿ ಜಿಟಿ-ಜಿಟಿ ಮಳೆಯಾಗುತ್ತಿದ್ದು, ಮಳೆಗೆ ಜನ ಹೈರಾಣಾಗಿದ್ದಾರೆ. ಮಳೆಯ ಜೊತೆ ಮೈಕೊರೆವ ಚಳಿ ಸಹ ಇದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

Exit mobile version