ಭಿಕ್ಷುಕರ ಕಾಟದಿಂದ ಹೆಚ್ತಿದೆ ಕೊರೋನಾ ಭೀತಿ

ಬೆಂಗಳೂರು ಅ.22: ಕೊರೋನಾ ಸಮಯದ ಈ ದಿನಗಳಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಘೋಷಿಸಿದೆ. ಅಂತರ ಕಾಪಾಡುವುದು, ಮಾಸ್ಕ್ ಹಾಕುವುದು, ಸ್ಯಾನಿಟೈಸರ್‌ ಬಳಸುವುದು ಇವೆಲ್ಲ ಸಾರ್ವಜನಿಕವಾಗಿ ನಾವು ಪಾಲಿಸಲೇ ಬೇಕಾದ ನಿಯಮಗಳು. ಇದನ್ನು ಪಾಲಿಸುವುದರಿಂದ ನಮಗೂ ನಮ್ಮ ಸುತ್ತಮುತ್ತಲಿರುವ ಎಲ್ಲರಿಗೂ ಒಳ್ಳೆಯದು.

ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಟ್ರಾಫಿಕ್‌ಗಳಲ್ಲಿ ಹಾಗೂ ಬಸ್ ಗಳಲ್ಲಿ ಭಿಕ್ಷುಕರ ಕಾಟ ಹೆಚ್ಚುತ್ತಿದೆ. ಮಾಸ್ಕ್‌ ಹಾಕದೆ, ಅಂತರ ಕಾಪಾಡದೆ ಪುಟ್ಟ ಮಕ್ಕಳು, ಹಸುಗೂಸುಗಳನ್ನು ಹಿಡಿದ ತಾಯಂದಿರು, ತೃತೀಯ ಲಿಂಗಿಗಳು  ಬಿಕ್ಷಾಟನೆ ಮಾಡುತ್ತಿದ್ದಾರೆ. ಅದ್ರಲ್ಲೂ ತೃತೀಯ ಲಿಂಗಿಗಳು ಸಾರ್ವಜನಿಕರ ಹತ್ತಿರ ಬಂದು, ಬಸ್ ನಲ್ಲಿ ಎಷ್ಟು ಜನರಿರುತ್ತಾರೋ ಅಷ್ಟೂ ಜನರ ಮೈ, ತಲೆಯನ್ನು ಮುಟ್ಟಿಕೊಂಡು ಹೋಗುತ್ತಾರೆ. ಈ ಕೊರೋನಾ ಸಮಯದಲ್ಲಿ ಎಲ್ಲರನ್ನೂ ಮುಟ್ಟಿಕೊಂಡು ತಲೆಗೆ ಇವರ ಅಂಗೈಯನ್ನು ಇಟ್ಟುಕೊಂಡು ಹೋಗುತ್ತಾರೆ. ಇವರು ಈ ರೀತಿ ಮಾಡುವುದರಿಂದ ಕೋವಿಡ್‌ ವೈರಸ್‌ ಬಹುಸುಲಭವಾಗಿ ಒಬ್ಬರಿಂದ ಬಬ್ಬರಿಗೆ ಹರಡುವ ಎಲ್ಲಾ ಸಾಧ್ಯತೆಗಳಿವೆ.

ಇನ್ನು ಕೆಲವು  ಮಕ್ಕಳು ಪೆನ್ನು, ಗುಲಾಬಿ ಹೂಗಳನ್ನು ಹಿಡ್ಕೊಂಡು ಮಾರಾಟಕ್ಕೆ ಬರುತ್ತಾರೆ. ಜನರನ್ನು ಮುಟ್ಟಿಕೊಂಡು ಬಿಕ್ಷಾಟನೆ ಮಾಡುತ್ತಾರೆ. ಇವರು ಯಾವುದೇ ಮಾಸ್ಕ್‌ ಧರಿಸದೇ ಇರುವುದು ಅತ್ಯಂತ ಆತಂಕಕಾರಿ ವಿಚಾರ. ಇವರ ಈ ಬೇಜವಾಬ್ದಾರಿ ವರ್ತನೆಯಿಂದ ತಮ್ಮ ಪ್ರಾಣಕ್ಕೂ ಕುತ್ತು ತರುವುದಲ್ಲದೆ ಇತರರಿಗೂ ಕೊರೋನಾ ಹಂಚುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಯಾವ ನಿಯಮವೂ ಇಲ್ಲವೇ? ಇವರಿಗೆ ಸರ್ಕಾರದ ರೂಲ್ಸ್ ಯಾವುದೂ ಅನ್ವಯಿಸುವುದಿಲ್ಲವೇ?

ಇವರ ಈ ವರ್ತನೆಯಿಂದ ಸಾರ್ವಜನಿಕರಿಗೆ ತುಂಬಾನೇ ಕಿರಿಕಿರಿಯುಂಟಾಗಿದೆ. ಅದ್ರಲ್ಲೂ ದ್ವಿಚಕ್ರ ವಾಹನಗಳಲ್ಲಿ ಓಡಾಡುವವರಿಗೆ ಇವರ ಕಾಟ ಮತ್ತು ಇವರಿಂದಾಗೋ ಅಪಾಯ ಹೆಚ್ಚಿನದ್ದಿರುತ್ತೆ. ಇನ್ನು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಟವಲ್‌, ಮೊಬೈಲ್‌ ಚಾರ್ಜರ್‌ ಮುಂತಾದ ವಸ್ತುಗಳನ್ನು ಮಾರುವವರು ಕೂಡ ಪ್ರಯಾಣಿಕರಿಗೆ ಕಿರಿಕಿರಿಯುಂಟು ಮಾಡುತ್ತಿದ್ದಾರೆ. ವೈರಸ್‌ ಹರಡೋ ಕೆಲಸ ಮಾಡುತ್ತಿದ್ದಾರೆ. ನಡೆದಾಡುವಾಗ ಮಾಸ್ಕ್‌ ಧರಿಸದೇ ಇದ್ದರೆ ಸಾರ್ವಜನಿಕರನ್ನು ಹಿಡಿದು ಫೈನ್‌ ಹಾಕೋ ಮಾರ್ಷಲ್‌ಗಳಿಗೆ ಇವೆಲ್ಲಾ ಯಾಕೆ ಕಾಣಲ್ಲ? ಇನ್ನು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಈ ರೀತಿ ನಿಯಮ ಮೀರುವವರ ವಿರುದ್ಧ ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಅನ್ನೋದು ಸಾರ್ವಜನಿಕರ ಪ್ರಶ್ನೆ. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇವರಿಂದ ಜನರಿಗಾಗೋ ಅಪಾಯವನ್ನು ತಪ್ಪಿಸಬೇಕು.

Exit mobile version