ಮಾಲಿನ್ಯ ನಿಯಂತ್ರಣಕ್ಕೆ ಜನರೇಟರ್‌ ಬಳಕೆ ನಿಷೇಧ

ದೆಹಲಿ, ಅ. 15: ಚಳಿಗಾಲದ ಆರಂಭದಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯದ ಬಿಸಿಗಾಳಿ ತಟ್ಟಿದೆ.  ಮಾಲಿನ್ಯ ನಿಯಂತ್ರಣಕ್ಕಾಗಿ  ಕೇಜ್ರಿವಾಲ್ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಕಟ್ಟಡ ನಿರ್ಮಾಣದ ಕೆಲ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಿದ ಕೇಜ್ರಿವಾಲ್ ಸರ್ಕಾರವು ಇದೀಗ ಜನರೇಟರ್‌ ಸೆಟ್‌ ಬಳಕೆ ನಿಷೇಧಕ್ಕೆ ಮುಂದಾಗಿದೆ. ಡೀಸೆಲ್, ಪೆಟ್ರೋಲ್, ಸೀಮೆಎಣ್ಣೆಯಿಂದ ಚಲಿಸುವ ಜನರೇಟರ್ ಸೆಟ್ ಗಳನ್ನು ನಿರ್ಮಾಣ ಕಾರ್ಯದ ವೇಳೆ ಬಳಸುವಂತಿಲ್ಲ. ಅವುಗಳ ಬಳಕೆ ಮೇಲೆ ಸರ್ಕಾರ ನಿಷೇಧ ಹೇರಿದೆ.

“ಹೆಚ್ಚುತ್ತಿರುವ ಮಾಲಿನ್ಯ ಮಟ್ಟವನ್ನು ತಡೆಗಟ್ಟಲು ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಸಣ್ಣ ಹಾಗೂ ದೊಡ್ಡ ಸೈಟ್ ಗಳಲ್ಲಿ 5 ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಚಳಿಗಾಲದ ಸಮಯದಲ್ಲಿ ಮಾಲಿನ್ಯ ಹೆಚ್ಚಾಗುವ ಕಾರಣ ಅಕ್ಟೋಬರ್ ಆರಂಭದಲ್ಲಿಯೇ ಉಸಿರಾಡುವುದು ಕಷ್ಟಕರವಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮುನ್ನೆಚ್ಚರಿಕಾ ಕ್ರಮಕೈಗೊಂಡಿದೆ” ಎಂದು ಪರಿಸರ ಸಚಿವ ಗೋಪಾಲ್ ರಾಯ್ ತಮ್ಮ ಟ್ವಿಟ್ಟರ್‌ ಮೂಲಕ ತಿಳಿಸಿದ್ದಾರೆ.

ಈಗಾಗಲೇ ಧೂಳು ನಿಯಂತ್ರಿಸಲು, ‘ಧೂಳು ವಿರೋಧಿ ಅಭಿಯಾನ’ ಆರಂಭವಾಗಿದ್ದು, ದೆಹಲಿಯಲ್ಲಿ 14 ತಂಡಗಳು ವಿವಿಧ ಪ್ರದೇಶಗಳಲ್ಲಿ ಧೂಳಿನ ಮಾನದಂಡಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುತ್ತಿವೆ. ಸರ್ಕಾರವಿರಲಿ, ಖಾಸಗಿಯಿರಲಿ ಕಟ್ಟಡ ನಿರ್ಮಾಣದ ವೇಳೆ ಸರ್ಕಾರದ ನಿಯಮ ಪಾಲನೆ ಕಡ್ಡಾಯವೆಂದು ಗೋಪಾಲ್ ರಾಯ್ ತಿಳಿಸಿದ್ದಾರೆ.

Exit mobile version