ಯೂಟ್ಯೂಬ್ ಮುಖೇನ ಲಕ್ಷಗಟ್ಟಲೆ ಗಳಿಸುತ್ತಿರುವ ನಿತಿನ್ ಗಡ್ಕರಿ

 ನವದೆಹಲಿ ಸೆ 18 : ಕೊರೊನಾ ಸಮಯದಲ್ಲಿ ಎಲ್ಲರೂ ಸುಮ್ಮನೆ ಕೆಲಸವಿಲ್ಲದೆ ಕೂತ್ತಿದ್ದರೆ ಇತ್ತ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತ್ರ ಯುಟ್ಯೂಬ್ ಮುಖೇನ ಭರ್ಜರಿ ಆದಾಯವನ್ನು ಪಡೆಯುತ್ತಿದ್ದಾರೆ.

ಈ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಕೊರೋನಾ ಸಮಯದಲ್ಲಿ ನಾನು ಎರಡು ಕೆಲಸ ಮಾಡಿದೆ. ಮನೆಯಲ್ಲೇ ಅಡುಗೆ ಮಾಡುವುದನ್ನು ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲು ಆರಂಭಿಸಿದೆ. ಆನ್ ಲೈನ್‌ನಲ್ಲಿ ಬಹಳಷ್ಟು ಭಾಷಣ ಮಾಡಿದೆ. ಅದನ್ನು ಯೂಟ್ಯೂಬ್‌ಗೆ ಅಪ್ಲೋಡ್ ಮಾಡುತ್ತಿದ್ದೆವು. ಅದಕ್ಕೆ ವ್ಯಾಪಕವಾದ ಪ್ರೇಕ್ಷಕರು ಸಿಕ್ಕಿದ್ದು, ಈಗ ಯೂಟ್ಯೂಬ್ ನನಗೆ ತಿಂಗಳಿಗೆ 4 ಲಕ್ಷ ರೂಪಾಯಿ ಪಾವತಿಸುತ್ತದೆ ಎಂದು ಹೇಳಿದ್ದಾರೆ.

ಲೋಡ್ಕಿ ಗ್ರಾಮದಲ್ಲಿ ನಡೆಯುತ್ತಿರುವ ಯೋಜನೆಯ ಕೆಲಸದ ಸ್ಥಿತಿಯನ್ನು ಪರಿಶೀಲಿಸಿದ ಅವರು,  ಬಳಿಕ ಮಾತನಾಡಿದ ಅವರು, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ, ಸುಮಾರು 95,000 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಮಾರ್ಚ್ 2023 ರ ವೇಳೆಗೆ ಪೂರ್ಣಗೊಳ್ಳಲಿದೆ. ಬಹುಪಾಲು ಕೆಲಸಗಳನ್ನು ಈಗಾಗಲೇ ಗುತ್ತಿಗೆದಾರರಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಹರಿಯಾಣದಲ್ಲಿ ಬರುವ ಹೆದ್ದಾರಿಯ ಸುಮಾರು 160 ಕಿಲೋಮೀಟರುಗಳ ಕೆಲಸವು ಮಾರ್ಚ್ 2022 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ದೆಹಲಿಯಿಂದ ರಾಜಸ್ಥಾನದ ದೌಸಾ ಮತ್ತು ವಡೋದರಾದಿಂದ ಅಂಕಲೇಶ್ವರದವರೆಗಿನ ರಸ್ತೆಯ ಒಂದು ಭಾಗವನ್ನು ಮಾರ್ಚ್ 2022 ಕ್ಕೆ ನಿರ್ಮಿಸಲಾಗುವುದು ಎಂದು ಈ ಸಂದರ್ಭದಲ್ಲಿ ಗಡ್ಕರಿ ಸ್ಪಷ್ಟ ಪಡಿಸಿದ್ದಾರೆ

Exit mobile version