ಬೆಂಗಳೂರು, ಅ.28: ಕೊರೊನಾ ಭೀತಿಯ ನಡುವೆ ಒಂದು ಕಡೆ ಬಿಹಾರ ರಾಜ್ಯದ ವಿಧಾನಸಭಾ ಚುನಾವಣಾ ಕಾವು ಏರುತ್ತಿದೆ. ಇಂದಿನಿಂದ ಬಿಹಾರದಲ್ಲಿ ಮೊದಲ ಹಂತದ ಮತದಾನ ಈಗಾಗಲೇ ಆರಂಭವಾಗಿದೆ. ಇನ್ನೊಂದೆಡೆ ರಾಜ್ಯದಲ್ಲಿ 4 ಸ್ಥಾನಕ್ಕೆ ವಿಧಾನ ಪರಿಷತ್ ಚುನಾವಣೆಯನ್ನು ನಡೆಸಲಾಗುತ್ತಿದೆ. ಈ ಚುನಾವಣೆ ಆಡಳಿತರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಈಗಾಗಲೇ ಮೂರೂ ಪಕ್ಷಗಳು ಭರದಿಂದ ಚುನಾವಣಾ ಪ್ರಚಾರ ನಡೆಸಿದ್ದು, ಇಂದು ಎಲ್ಲಾ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಯಾರ ಪಾಲಿಗೆ ಸೋಲು? ಹಾಗೂ ಯಾರ ಪಾಲಿಗೆ ಗೆಲುವು ಎಂಬ ಲೆಕ್ಕಾಚಾರಗಳು ರಾಜ್ಯ ರಾಜಕೀಯದಲ್ಲಿ ಗರಿಗೆದರಿವೆ ಎಂದರೆ ತಪ್ಪಾಗಲಾರದು.
ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ವಲಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ, ಹಾಗೂ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಯಾರು ಗೆಲುವು ಸಾಧಿಸುತ್ತಾರೆ? ಎಂಬುದು ಇದೀಗ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿರುವುದಂತು ಸತ್ಯದ ಸಂಗತಿ.
ಈ ಬಾರಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಶಾಸಕ ಪುಟ್ಟಣ್ಣ, ಕಳೆದ ಬಾರಿ ಜೆಡಿಎಸ್ ಪಕ್ಷದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹೀಗಾಗಿ ಬೆಂಗಳೂರು ಶಿಕ್ಷಕರ ಕ್ಷೇತ್ರ ಬಿಜೆಪಿ ಮತ್ತು ಜೆಡಿಎಸ್ ಪಾಲಿಗೆ ಗೆಲ್ಲಲೇಬೇಕಾದ ನಿರ್ಣಾಯಕ ಮತ್ತು ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.
ಇಂದು ಬೆಳಗ್ಗೆ 8 ರಿಂದ ಸಂಜೆ 5ಗಂಟೆಯವರೆಗೆ ಈ ನಾಲ್ಕೂ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಮತದಾನದ ಫಲಿತಾಂಶವೇನೆಂದು ಕಾದು ನೋಡಬೇಕಾಗಿದೆ.