ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಇಂದು ಲೋಕಾರ್ಪಣೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕಂಡ ಕನಸು ಇಂದು ನನಸಾಗಿದೆ. ‘ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’ ಎಂಬ ಹಿರಿಮೆಗೆ ಪಾತ್ರವಾಗಿರುವ 9.02 ಕಿ.ಮೀ ಉದ್ದದ ಮನಾಲಿ-ಲೇಹ್‌ ನಡುವಿನ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು.

ಸಮುದ್ರಮಟ್ಟದಿಂದ 10 ಸಾವಿರ ಅಡಿ ಎತ್ತರದ ಹಿಮಾಚಲಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಸುರಂಗ ಮಾರ್ಗಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರಿಡಲಾಗಿದೆ. ಈ ಸುರಂಗವು ಮನಾಲಿ ಹಾಗೂ ಲೇಹ್‌ ನಗರಗಳ ನಡುವಣ ಅಂತರ 46 ಕಿ.ಮೀ.ಯಷ್ಟು ತಗ್ಗಿಸಲಿದೆ. ಪ್ರಯಾಣದ ಅವಧಿ 4ರಿಂದ 5 ತಾಸಿನಷ್ಟು ಉಳಿತಾಯವಾಗಲಿದೆ.

ವ್ಯೂಹಾತ್ಮಕವಾಗಿ ಮಹತ್ವವಾಗಿರುವ ಈ ಯೋಜನೆಗೆ 2002ರಲ್ಲಿ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಚಾಲನೆ ನೀಡಿತ್ತು. 2002ರಲ್ಲಿ ಅಡಿಗಲ್ಲು ಹಾಕಲಾಗಿದ್ದ ಈ ಕಾಮಗಾರಿ 3300 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಂಡಿದೆ. 2040 ರಲ್ಲಿ ಪೂರ್ಣಗೊಳ್ಳಬೇಕಿದ್ದ ಈ ಸುರಂಗವು 2014ರ ನಂತರದ ಚುರುಕುತನದ ಕಾಮಗಾರಿಯಿಂದಾಗಿ ಇಂದು ಲೋಕಾರ್ಪಣೆಗೊಂಡಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಎಮ್. ಎಮ್. ನರವಾನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಶೇಷತೆಗಳು

9.02 ಕಿ.ಮೀ. ಸುರಂಗದ ಉದ್ದ

5 ತಾಸು: ಸುರಂಗದಿಂದ ಅವಧಿ ಉಳಿತಾಯ

46 ಕಿ.ಮೀ.: ಮನಾಲಿ, ಲೇಹ್‌ ನಡುವಣ ಅಂತರ ಇಳಿಕೆ

Exit mobile version