ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿದ ನಟ ದರ್ಶನ್ ಹಾಗೂ ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು

ಹಿಂದಿ ದಿವಸ್‍ ಆಚರಣೆ, ತ್ರಿಭಾಷಾ ನೀತಿಗೆ ಸಂಬಂಧಿಸಿದಂತೆ ಕೇಳಿ ಬರುತ್ತಿರುವ ವಿರೋಧಕ್ಕೆ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ದನಿಗೂಡಿಸಿದ್ದಾರೆ. ಚಾಲೆಂಜಿಂಗ್‍ ಸ್ಟಾರ್‍ ದರ್ಶನ್‍ ಸೇರಿದಂತೆ ಸ್ಯಾಂಡಲ್‍ವುಡ್‍ನ ಹಲವರು ನಟರು, ನಿರ್ದೇಶಕರು ಸಹ ಹಿಂದಿ ಹೇರಿಕೆಗೆ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಫೇಸ್‍ಬುಕ್ ಹಾಗೂ ಟ್ವಿಟರ್‍ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ನಟ ದರ್ಶನ್, “ಬಹಳ ವರ್ಷಗಳಿಂದಲೂ ಈ ಹಿಂದಿ ಹೇರಿಕೆ ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಬಾರ್ಡರ್ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ.

ಇದನ್ನು ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ಮುಂದೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನಗಳು ಹತ್ತಿರದಲ್ಲೇ ಇದೆ.
ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ.
ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು.

ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಭಾರತ ಸಂವಿಧಾನದ ಪ್ರತೀಕವಾಗಿದೆ.
ಯಾವುದೋ ಉತ್ತರದ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯಕರ ಸಂಗತಿಯೆಂದರೆ ತಪ್ಪಾಗಲಾರದು.
ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ.

ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಎಂದು ಬರೆದುಕೊಂಡಿದ್ದಾರೆ.
ಇನ್ನೂ ಸ್ಯಾಂಡಲ್‍ವುಡ್ನ ಪ್ರತಿಭಾವಂತ ನಿರ್ದೇಶಕ ರಿಷಭ್ ಶೆಟ್ಟಿ ಸಹ ಟ್ವಿಟರ್‍ನಲ್ಲಿ ನಡೆಯುತ್ತಿರುವ #StopHindiImposition ಹ್ಯಾಶ್‍ಟ್ಯಾಗ್ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಿಷಭ್‍ ಶೆಟ್ಟಿ, “ಸುಲಿದಿತ್ತ ರಸಬಾಳೆಯಷ್ಟು ಸುಲಲಿತವಾದ ಭಾಷೆ ನಮ್ಮದಿರುವಾಗ, ಇನ್ನೊಂದು ಭಾಷೆಯ ಅಗತ್ಯವಾದರೂ ಏನು? ನಾವು ಕನಸು ಕಾಣೋ ಭಾಷೆ, ನಮ್ಮ ನಾಲಿಗೆಯಲಾಡಲು ಬಿಡಿ. ಓಲೈಸುವ ನೆಪದಿ ನಮ್ಮ ಕಂದಮ್ಮಗಳಾಡೋ ‘ಅಮ್ಮ’ ಪದದಿಂದ ‘ಅ’ ತೆಗೆದು ‘ಮಾ’ ಉಳಿಸುವ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ..! ಜೈ ಕರ್ನಾಟಕ ಮಾತೆ” ಎಂದು ಕರ್ನಾಟಕದ ಭೂಪಟವನ್ನು ಟ್ಯಾಗ್ ಮಾಡಿ ಟ್ವೀಟ್‍ ಮಾಡಿದ್ದಾರೆ.

ಇನ್ನೂ ಹಿಂದಿ ಹೇರಿಕೆ ವಿರುದ್ಧದ ಅಭಿಯಾನಕ್ಕೆ ಡಾಲಿ ಧನಂಜಯ ಕೂಡ ಬೆಂಬಲ ಸೂಚಿಸಿದ್ದು “ನನ್ನ ದೇಶ ಭಾರತ ನನ್ನ ಬೇರು ಕನ್ನಡ ಎಲ್ಲ ಭಾಷೆಯನ್ನು ಗೌರವಿಸುತ್ತೇನೆ ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ ಯಾವುದೇ ಹೇರಿಕೆ ಸಲ್ಲದು” ಎಂದು ಟ್ವೀಟ್ ಮಾಡಿದ್ದಾರೆ.
ಅದೇ ರೀತಿ ನಟ ನೀನಾಸಂ ಸತೀಶ್‍ ಕೂಡ ಹಿಂದಿ ಹೇರಿಕೆಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನಾವು ಯಾವ ಭಾಷೆಯನ್ನು ಮಾತಾಡಬೇಡಿ, ಯಾವ ಭಾಷೆಯ ಸಿನಿಮಾಗಳನ್ನು ನೋಡಬೇಡಿ,ಯಾವ ಭಾಷೆಯನ್ನು ಕಲಿಯಬೇಡಿ,ಎಂದೂ ಎಲ್ಲೂ ಹೇಳಿಲ್ಲ, ಹೇರಿಕೆ ಬೇಡ, ಎಂದಷ್ಟೆ. ಯಾಕೆ ನೀವು ಕನ್ನಡಿಗರಾಗಿ ನಿಮ್ಮ ಭಾಷೆ ಬಗ್ಗೆ ಅಭಿಮಾನ ಇಟ್ಟು ಕೊಳ್ಳುವುದು, ಅಪರಾಧವೇ? ಇಡೀ ಭಾರತ ಕನ್ನಡವನ್ನು ಕಲಿಯಲಿ ತಪ್ಪೇನಿದೆ? ನಾವು ಹೇರಿಕೆ ಮಾಡೋಣ…” ಎಂದಿದ್ದಾರೆ.

ಇವರಷ್ಟೇ ಅಲ್ಲದೇ ‘ಆ ದಿನಗಳು’ ಖ್ಯಾತಿಯ ನಟ ಚೇತನ್, ನಿಖಿಲ್ ಕುಮಾರಸ್ವಾಮಿ, ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ಕೆ.ಎಂ. ಚೈತನ್ಯ ಸೇರಿದಂತೆ ಸಾಕಷ್ಟು ಮಂದಿ ರಾಜ್ಯದಲ್ಲಿ ಹಿಂದಿ ಹೇರಿಕೆ ಸಲ್ಲದು ಎಂದು ವಿರೋಧಿಸಿದ್ದಾರೆ. ಹಿಂದಿ ಎಲ್ಲ ಭಾಷೆಗಳಂತೆಯೇ ಒಂದು. ಅದನ್ನು ಬಲವಂತವಾಗಿ ಹೇರುವುದು ಸರಿಯಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ.

Exit mobile version