ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರ ರಹಸ್ಯ ಸಭೆ

ಹುಬ್ಬಳ್ಳಿ, ಅ. 28: ಯಾವುದೇ ಪಕ್ಷಗಳ ರಹಸ್ಯ ಚರ್ಚೆಗಳು ಸರ್ವೇ ಸಾಮಾನ್ಯವಾಗಿ ಹೋಗಿದೆ. ಅದೇ ರೀತಿ ನಿನ್ನೆ ತಡರಾತ್ರಿ ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರು ರಹಸ್ಯ ಸಭೆ ನಡೆಸಿದ್ದು, ಉತ್ತರ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಕುರಿತು ರಹಸ್ಯ ಸಭೆ ನಡೆಸಿದೆ ಎನ್ನಲಾಗುತ್ತಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ, ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗಳ ಕುರಿತು ಚರ್ಚೆಗಳಾಗಿವೆ‌.  ಮಸ್ಕಿ ಕ್ಷೇತ್ರದಲ್ಲಿನ ಬಿಜೆಪಿ ಮುಖಂಡರ ಭಿನ್ನಾಭಿಪ್ರಾಯ ಶಮನಕ್ಕೆ ಸಂಧಾನ ನಡೆದಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳ ಬಗ್ಗೆಯೂ ವಿಮರ್ಶೆ ನಡೆದಿದೆ ಎನ್ನುವುದು ಮೂಲಗಳಿಂದ ತಿಳಿದು ಬಂದಿದೆ.

ಈ ಸಭೆಯು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರ ನೇತೃತ್ವದಲ್ಲಿ ನಡೆಸಲಾದ ಈ ಸಭೆಯು ಗೋಕುಲ ರಸ್ತೆಯ ಡೆನಿಸನ್ಸ್ ಹೊಟೆಲ್‌ನಲ್ಲಿ ನಡೆದಿರುವ ಎರಡು ಸುತ್ತಿನ ಸಭೆಯಲ್ಲಿ ಹಲವು ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಈ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ರಮೇಶ್ ಕತ್ತಿ, ಮಹಾಂತೇಶ್ ಕೌಟಗಿಮಠ, ಆನಂದ ಮಹಾಮನಿ, ಬಾಲಚಂದ್ರ ಜಾರಕಿಹೋಳಿ, ಸಂಗಣ್ಣ ಕರಡಿ, ಪ್ರತಾಪ್‌ಗೌಡ ಪಾಟೀಲ್, ಮಹೇಶ್ ತೆಂಗಿನಕಾಯಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ.

ಧಾರವಾಡ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಬಿಜೆಪಿ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿನ ಭಿನ್ನಾಭಿಪ್ರಾಯ ಮತ್ತು ಸಮಸ್ಯೆಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ಹೊಸಬರು ಮತ್ತು ಬಿಜೆಪಿ ಹಳಬರ ನಡುವಿನ ಸಂಘರ್ಷಗಳು ಸಭೆಯಲ್ಲಿ ಮಾರ್ದನಿಸಿವೆ. ಹೊಂದಾಣಿಕೆ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಿ. ಪಕ್ಷಕ್ಕೆ ಮುಜುಗುರ ತರದಂತೆ ನಡೆದುಕೊಳ್ಳಿ ಎಂಬುದಾಗಿ ಪ್ರಮುಖರು ಸೂಚನೆ ನೀಡಿದ್ದಾರೆ.

“ಪ್ರಮುಖ ನಾಯಕರು ಸಭೆ ನಡೆಸಿದ್ದು ನಿಜ. ಕಾರ್ಯಕರ್ತರ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ಸೇರಿದ್ದೆವು. ಬೆಳಗಾವಿ ಮತ್ತು ಮಸ್ಕಿ ರಾಜಕೀಯ ವಿಚಾರಗಳು ಚರ್ಚೆಗೆ ಬಂದಿವೆ.‌ಪ್ರತಾಪ್‌ಗೌಡರಿಗೆ ಟಿಕೆಟ್ ಕೊಡುವುದಾಗಿ ಪ್ರಾಮಿಸ್ ಮಾಡಿದ್ದೇವೆ. ಹೊಂದಾಣಿಕೆಯಿಂದ ಹೋಗುವಂತೆ ಸ್ಥಳೀಯ ನಾಯಕರಿಗೆ ಸೂಚಿಸಿದ್ದೇವೆ. ಯತ್ನಾಳ್ ಹೇಳಿಕೆ ಬಗ್ಗೆ ಪಕ್ಷ ತಲೆ ಕೆಡಿಸಿಕೊಂಡಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನನ್ನ ಮಗನಿಗೆ ಟಿಕೆಟ್ ಕೊಡಿಸುವ ವಿಚಾರ ಪ್ರಸ್ತಾಪವಾಗಿಲ್ಲ. ಬೆಳಗಾವಿ ಚುನಾವಣೆ ಘೋಷಣೆಯಾದ ನಂತರ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರ ಬಳಿ ಪ್ರಮುಖರು ಅಹವಾಲು ಹೇಳಿಕೊಂಡಿದ್ದಾರೆ.‌‌ ತಮ್ಮ ಕ್ಷೇತ್ರದ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ” ಎಂದು ಗೌಪ್ಯ ಸಭೆಯ ಕುರಿತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version