ಹೈದರಾಬಾದ್‌ ಮಹಾ ಮಳೆಗೆ 12 ಮಂದಿ ಸಾವು, ಹಲವರು ಕಣ್ಮರೆ

ಹೈದರಾಬಾದ್,ಅ.14: ಕಳೆದ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೈದರಾಬಾದ್ ನಲ್ಲಿ ಇದುವರೆಗೆ 12 ಮಂದಿ ಮೃತಪಟ್ಟಿದ್ದಾರೆ. ಹೈದರಾಬಾದ್ ನ ಶಂಶಾಬಾದ್ನ ಗಗನ್ ಪಹಾದ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮನೆಗೋಡೆ ಕುಸಿದು ಮೂವರು ಮೃತಪಟ್ಟಿದ್ದಾರೆ. ಹೈದರಾಬಾದಿಗೆ ಭಾರತೀಯ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಣೆ ಮಾಡಿದೆ.

ತೆಲಂಗಾಣದ ವಿಕಾರಾಬಾದ್, ಸಿದ್ದಿಪೇಟ್ ಮತ್ತು ಜಾಗಾಂವ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ತೆಲಂಗಾಣ ರಾಜ್ಯ ಸರ್ಕಾರ ಇಂದು ಮತ್ತು ನಾಳೆ ರಜೆ ಘೋಷಿಸಿದೆ. ಹೆಚ್ಚು ಮಳೆ ಬರುವ ನಿರೀಕ್ಷೆ ಇರುವುದರಿಂದ ಜನರು ಹೊರ ಬರಬಾರದು ಎಂದು ತೆಲಂಗಾಣ ಸಚಿವ ಕೆಟಿ ರಾಮರಾವ್ ಮನವಿ ಮಾಡಿದ್ದಾರೆ. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದರು.

 ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೈದರಾಬಾದ್ ನಲ್ಲಿ ಕಾಂಪೌಂಡ್ ಗೋಡೆ ಕುಸಿದು 10 ಮನೆಗಳ ಮೇಲೆ ಬಿದ್ದು, ಎರಡು ತಿಂಗಳ ಮಗು ಸೇರಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ತೆಲಂಗಾಣದ 14 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೈದರಾಬಾದ್ ನ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಕಳೆದ 48 ಗಂಟೆಗಳಲ್ಲಿ 12 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಭೀಕರ ಪರಿಸ್ಥಿತಿಯಿಂದಾಗಿ ನಿನ್ನೆ ರಾತ್ರಿ ಹೈದರಾಬಾಗೆ ನೀರು ಸರಬರಾಜು ಮಾಡುವ ಹಿಮಯತ್ ಸಾಗರ ಅಣೆಕಟ್ಟಿನ ಗೇಟ್‌ಗಳನ್ನು ಅಧಿಕಾರಿಗಳು ತೆರೆದಿದ್ದು, ಇದರಿಂದಾಗಿ ಹೈದರಾಬಾದ್ ನಲ್ಲಿ ಮತ್ತಷ್ಟು ಪ್ರವಾಹದ ಭೀತಿ ಎದುರಾಗಿದೆ.

Exit mobile version