ಹೊಸ ವರ್ಷದ ಆರಂಭದಲ್ಲಿ ಕೊರೊನಾ ಲಸಿಕೆ ಲಭ್ಯ

ಬೆಂಗಳೂರು, ಅ.27: ವಿಧಾನಸೌಧದಲ್ಲಿ ಆಸ್ಟ್ರಾಜನಿಕಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, 2021ರ ಆರಂಭದಲ್ಲೇ ಕೋವಿಡ್ ಲಸಿಕೆ ದೊರೆಯುವ ನಿರೀಕ್ಷೆಯಿದ್ದು, ರಾಜ್ಯದ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಪುಣೆಯ ಸೇರಂ ಸಂಸ್ಥೆಯೊಂದಿಗೆ ಆಸ್ಟ್ರಾಜನಿಕಾ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡು ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಪ್ರಯೋಗ ಮಾಡಲಾಗುತ್ತಿದೆ. ಮೈಸೂರಿನ ಜೆಎಸ್‌ಎಸ್ ಸಂಸ್ಥೆ ಜೊತೆಗೂ ಒಪ್ಪಂದವಾಗಿದ್ದು, 56 ದಿನಗಳ ಹಿಂದಷ್ಟೇ ಒಂದನೇ ಹಂತದ ಪ್ರಯೋಗವನ್ನು ಯಶಸ್ವಿಯಾಗಿ ಮಾಡಲಾಗಿದೆ. ಇನ್ನು 2 ಹಾಗೂ 3 ನೇ ಹಂತದಲ್ಲಿ ದೇಶದ 1,600 ಜನರ ಮೇಲೆ ಲಸಿಕೆ ಪ್ರಯೋಗ ಮಾಡಲಾಗುತ್ತದೆ. ಇನ್ನಷ್ಟು ಹೆಚ್ಚು ಜನರನ್ನು ಲಸಿಕೆ ಪ್ರಯೋಗಕ್ಕೆ ಒಳಪಡಿಸಬೇಕು ಎಂದು ಸಂಸ್ಥೆಗೆ ಕೋರಲಾಗಿದೆ. ಅದಲ್ಲದೇ ರಾಜ್ಯದಲ್ಲಿ ಲಸಿಕೆ ವಿತರಣೆ ಸಿದ್ಧತೆ ಕುರಿತು ಚರ್ಚಿಸಲಾಗಿದೆ. 100 ಕೋಟಿ ಜನರಿಗೆ ಲಸಿಕೆ ನೀಡುವ ಸಾಮರ್ಥ್ಯವಿದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ ಎಂದು ಸಚಿವರು ವಿವರಿಸಿದರು.

ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಸಿದ್ಧತೆ ನಡೆಸಲಾಗುತ್ತಿದ್ದು, ಮುಂದಿನ ಹಂತದಲ್ಲಿ ವಯೋವೃದ್ಧರು, ಇತರೆ ಸಹ ಅಸ್ವಸ್ಥತೆಗಳನ್ನು ಹೊಂದಿರುವವರಿಗೆ, ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಲಸಿಕೆ ನೀಡಲಾಗುತ್ತದೆ ಎನ್ನಲಾಗುತ್ತಿದೆ.

ಲಸಿಕೆಯ ದರದ ಬಗ್ಗೆ ಈಗ ಚರ್ಚೆಯಾಗುತ್ತಿದ್ದು, ನಮ್ಮ ಸರ್ಕಾರ ಕೋವಿಡ್ ಪರೀಕ್ಷೆ, ಚಿಕಿತ್ಸೆ ‌ಮೊದಲಾದ ವೆಚ್ಚಗಳನ್ನು ಭರಿಸಿದೆ.‌ ಅದೇ ರೀತಿ‌ ರಾಜ್ಯದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಬದ್ಧ ಎಂದು ತಿಳಿಸಿದರು.

ನಾನು ಆರೋಗ್ಯ ಖಾತೆ ವಹಿಸಿಕೊಂಡ ಬಳಿಕ ಕಳೆದ ಹತ್ತು ದಿನಗಳಿಂದ ಈಚೆಗೆ ಕೋರಾನಾ ಸೋಂಕು ಮತ್ತು ಕೋವಿಡ್ ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಉಂಟಾಗಿದೆ. ಇದಕ್ಕೆ ಕೆಲವರು ಸಂಶಯಾಸ್ಪದವಾಗಿ ನೋಡುತ್ತಿದ್ದಾರೆ. ಯಾವುದೇ ಅಂಕಿ-ಅಂಶಗಳಲ್ಲಿಯೂ ನಾವು ವ್ಯತ್ಯಾಸ ಮಾಡಿರುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೇ ಕರ್ನಾಟಕ ಸರ್ಕಾರ ಅತ್ಯಂತ ಪಾರದರ್ಶಕವಾಗಿ ನಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.

ಸಾವು, ಸೋಂಕು ಮತ್ತು ಗುಣಮುಖರಾದವರ ಅಂಕಿ-ಅಂಶಗಳನ್ನು ಅತ್ಯಂತ ಪಾರದರ್ಶಕವಾಗಿ ನೀಡುತ್ತಿದ್ದೇವೆ. ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಲು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಯೊಬ್ಬ ಕೊರೋನಾ ಯೋಧರ ಪ್ರಯತ್ನ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಸ್ಟ್ರಾಜನಿಕಾ ವ್ಯವಸ್ಥಾಪಕ ನಿರ್ದೇಶಕ ಗಗನ್ ದೀಪ್ ಸಿಂಗ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ್ ಸಭೆಯಲ್ಲಿದ್ದರು.

Exit mobile version