ಬೆಂಗಳೂರು, ಡಿ. 13: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿರುವ ನಡೆಸುತ್ತಿರುವ ಮುಷ್ಕರ ಮೂರನೇ ದಿನವೂ ಮುಂದುವರಿದಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ, ರಾಜ್ಯದಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳು ಭಾನುವಾರವೂ ರಸ್ತೆಗಿಳಿಯಲಿಲ್ಲ. ಸರ್ಕಾರ ಮತ್ತು ಸಾರಿಗೆ ನೌಕರರ ಜಗಳದಲ್ಲಿ ಪ್ರಯಾಣಿಕರು ಪರದಾಡಿದರು.
ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸುತ್ತಿದ್ದ ಸಾರಿಗೆ ನೌಕರರು ತಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಬಿಗಿಪಟ್ಟು ಹಿಡಿದಿದ್ದಾರೆ. ಎರಡು ದಿನಗಳ ಬಳಿಕವೂ ಸರ್ಕಾರ ಬೇಡಿಕೆ ಈಡೇರಿಸಲು ಒಪ್ಪದಿದ್ದಾಗ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದರು.
ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಭಾನುವಾರ ಬೆಳಿಗ್ಗೆ ನೌಕರರು ಉಪವಾಸ ಸತ್ಯಾಗ್ರಹ ಆರಂಭಿಸಿದರು. 300ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು. ರೈತ ಸಂಘಟನೆಗಳು ನಾಯಕರು, ಕನ್ನಡ ಪರ ಹೋರಾಟಗಾರರು, ಸಾರಿಗೆ ನೌಕರರ ಕುಟುಂಬದವರು ಬೆಂಬಲ ನೀಡಿದರು.
ಮೈಸೂರಿನ ಡಿಸಿ ಕಚೇರಿಯಲ್ಲಿ ಗಾಂಧಿ ಫೋಟೋದೊಂದಿಗೆ ಪ್ರತಿಭಟನೆ ನಡೆಸಿದ ಸಾರಿಗೆ ನೌಕರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಮ್ಮ ಬೇಡಿಕೆ ಈಡೇರುವ ತನಕ ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ಎಚ್ಚರಿಸಿದರು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನೌಕರರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಬಸ್ ತಡೆದಿದ್ದ 9 ಸಿಬ್ಬಂದಿಯನ್ನು ಶನಿವಾರ ಬಂಧಿಸಿದ್ದ ಉಪ್ಪಾರಪೇಟೆ ಪೊಲೀಸರು ಭಾನುವಾರ ಎಫ್ಐಆರ್ ದಾಖಲಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಬೆಂಗಳೂರಿನ ಕೆಲವು ಭಾಗದಲ್ಲಿ ಪೊಲೀಸರ ರಕ್ಷಣೆಯಲ್ಲಿ ಕೆಲವು ಬಸ್ ಗಳು ಸಂಚರಿಸಿವೆ.
ಭಾನುವಾರ ಬೆಳಿಗ್ಗೆ ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಎಂ.ಸವದಿ ಅವರು ಸಭೆ ನಡೆಸಿದರು. ಯೂನಿಯನ್ ನಾಯಕರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಅವಕಾಶ ನೀಡದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ಇದು ಒಡೆದಾಳುವ ನೀತಿ ಎಂದು ಹೇಳಿದರು.
ಈಗಾಗಲೇ ಎರಡು ದಿನಗಳಿಂದ ಸಾರ್ವಜನಿಕರು ಬಸ್ ಇಲ್ಲದೇ ತೀವ್ರ ತೊಂದರೆ ಅನುಭವಿಸಿದ್ದಾರೆ. ಸೋಮವಾರವೂ ಬಸ್ ಗಳು ರಸ್ತೆಗಿಳಿಯದಿದ್ದರೆ ಅದರ ಪರಿಣಾಮ ಭೀಕರವಾಗಲಿದೆ. ಪ್ರತಿಪಕ್ಷ ಕಾಂಗ್ರೆಸ್ ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದೆ ಎಂದು ಆರೋಪಿಸಿದೆ.