ಪ್ರಪಂಚದಲ್ಲಿರುವ ಚಿನ್ನದಲ್ಲಿ 11% ಚಿನ್ನ, ನಮ್ಮ ಭಾರತೀಯ ಮಹಿಳೆಯರ ಬಳಿಯಿದೆ!

gold

ಆಭರಣ(Ornaments) ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗಂತೂ ಆಭರಣದ ವ್ಯಾಮೋಹ ಹೆಚ್ಚಿದೆ. ಕೈಗೆ, ಕಾಲಿಗೆ, ಕೊರಳಿಗೆ ಅಂತೆಲ್ಲಾ ಹೊಸ ಹೊಸ ಡಿಸೈನ್ ಮಾಡಿಸಿಕೊಂಡು ಧರಿಸುತ್ತಾರೆ. ಹೊಸ ವಿನ್ಯಾಸ(Design) ಕಣ್ಣಿಗೆ ಬಿದ್ದರೆ ಸಾಕು, ನನಗೂ ಆ ರೀತಿಯ ಆಭರಣ ಬೇಕು ಎನ್ನುವ ಆಸೆ. ದಿನಕ್ಕೊಂದು ಬದಲಾಗುವ ಆಭರಣದ ವಿನ್ಯಾಸದ ಮೇಲೆ ಆಭರಣ ಪ್ರಿಯರ ಕಣ್ಣು ಸದಾ ಇರುತ್ತದೆ. ಚಿನ್ನ, ಬೆಳ್ಳಿ ಹೆಚ್ಚೆಚ್ಚು ಧರಿಸಿದ್ದಾರೆಂದರೆ ಅವರು ಆರ್ಥಿಕವಾಗಿ ಪ್ರಬಲರಾಗಿದ್ದಾರೆ ಅಂತ ನಿರ್ಧರಿಸುತ್ತಾರೆ.

ಇನ್ನು ಕೆಲವರು ತಮ್ಮ ಬಳಿ ಆಭರಣವಿದ್ದರೂ ಅದನ್ನು ಪ್ರದರ್ಶನ ಮಾಡಲು ಬಯಸಲ್ಲ. ಸೌಂದರ್ಯವನ್ನು ಹೆಚ್ಚಿಸುವ ಆಭರಣ ಕಷ್ಟ ಕಾಲದಲ್ಲೂ ಕೈಹಿಡಿಯುತ್ತದೆ. ಹೀಗಾಗಿ ಆಭರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಪ್ರತಿ ಧರ್ಮದಲ್ಲೂ ಆಭರಣಕ್ಕೆ ಹೆಚ್ಚು ಬೇಡಿಕೆ ಇದೆ. ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆ ಕೂಡಾ ಇದೆ. ಈ ಎಲ್ಲದರ ನಡುವೆ ಆಭರಣವನ್ನು ಧರಿಸಲು ವೈಜ್ಞಾನಿಕ ಕಾರಣ ಕೂಡಾ ಇದೆ. ಆಭರಣ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ ಅದನ್ನು ಧರಿಸಲು ವೈಜ್ಞಾನಿಕ ಕಾರಣಗಳೂ ಇವೆ.

ದೇಹದ ಮೇಲ್ಭಾಗದಲ್ಲಿ ಬಂಗಾರ ಧರಿಸಿದರೆ, ದೇಹದ ಕೆಳಭಾಗದಲ್ಲಿ ಬೆಳ್ಳಿ ಆಭರಣವನ್ನು ಧರಿಸುವುದು ಪದ್ಧತಿ. ಇನ್ನು, ಚಿನ್ನದ ಬಗ್ಗೆ ಹೆಣ್ಣು ಮಕ್ಕಳಿಗೆ ವ್ಯಾಮೋಹ ಹೆಚ್ಚೇ ಇರುತ್ತೆ. ಅವರಷ್ಟು ಚಿನ್ನ ಪ್ರಿಯರು ಬೇರೆ ಇರಲಾರರು. ಪುರುಷರು ಇವರಿಗೆ ಖಂಡಿತಾ ಸಾಟಿಯಲ್ಲ. ಪ್ರತಿವರ್ಷ ಚಿನ್ನದ ಆಭರಣ ಖರೀದಿಸಿದರೂ ಅವರಿಗೆ ತೃಪ್ತಿ ಇರುವುದೇ ಇಲ್ಲ. ಪ್ರತಿವರ್ಷ ಹೊಸ ಹೊಸ ನಮೂನೆಯ ಆಭರಣ ಖರೀದಿಸಿದರೆ ಅವರಿಗೇನೋ ಸಮಾಧಾನ. ಅದನ್ನು ಧರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಚಿನ್ನದ ಒಡವೆಗಳು ಮಾತ್ರ ಬೇಕು.

ಚಿನ್ನದ ಬೆಲೆ ದುಬಾರಿಯಾದರೂ ಚಿನ್ನದ ಮೇಲಿನ ಹೆಣ್ಣು ಮಕ್ಕಳ ವ್ಯಾಮೋಹಕ್ಕೇನೂ ಧಕ್ಕೆ ಆಗಿಲ್ಲ. ಭಾರತೀಯ ಹೆಣ್ಣುಮಕ್ಕಳಿಗಂತೂ ಚಿನ್ನ ಎನ್ನುವುದು ಕೇವಲ ವಸ್ತುವಲ್ಲ, ಅದು ಅವರ ಭಾವನಾತ್ಮಕ ಸಂಗಾತಿ. ಹಾಗಾಗಿಯೇ ಏನೋ ಇಡೀ ಪ್ರಪಂಚದಲ್ಲಿರೋ ಚಿನ್ನದಲ್ಲಿ ನಮ್ಮ ಭಾರತೀಯ ಮಹಿಳೆಯರೇ ಸರಿಸುಮಾರು 11% ಚಿನ್ನವನ್ನು ಹೊಂದಿದ್ದಾರೆ ಎಂಬ ವರದಿ ನಿಜಕ್ಕೂ ಅಚ್ಚರಿಯೇ ಸರಿ!

Exit mobile version