ಜನವರಿ 26ರ ವಿಧ್ವಂಸಕ ಕೃತ್ಯದ ರುವಾರಿ ದೀಪ್ ಸಿಧುಗೆ 14 ದಿನಗಳ ನ್ಯಾಯಾಂಗ ಬಂಧನ

ನವದೆಹಲಿ, ಫೆ. 23: ಜನವರಿ 26ರಂದು ದೆಹಲಿ ರೈತರ ಟ್ರ್ಯಾಕ್ಟರ್​ ರ್ಯಾಲಿ ವೇಳೆ ನಡೆದ ವಿಧ್ವಂಸಕ ಕೃತ್ಯದ ರುವಾರಿ ಎಂದು ಗುರುತಿಸಲಾಗಿರುವ ದೀಪ್​ ಸಿಧುಗೆ ದೆಹಲಿ ನ್ಯಾಯಾಲಯ ಇಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದ 91 ದಿನಗಳಿಂದ ದೆಹಲಿಯಲ್ಲಿ ಹೋರಾಟದಲ್ಲಿ ತೊಡಗಿದ್ದಾರೆ. ಈ ನಡುವೆ ಕಳೆದ ಜನವರಿ 26 ರಂದು ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್​ ರ‍್ಯಾಲಿ ಆಯೋಜಿಸಿದ್ದರು. ಆದರೆ, ಈ ವೇಳೆ ರೈತರ ಒಂದು ಗುಂಪು ಕೆಂಪುಕೋಟೆಗೆ ಮುತ್ತಿಗೆ ಹಾಕಿ ಕೋಟೆಯನ್ನು ವಶಪಡಿಸಿಕೊಂಡಿತ್ತು. ಈ ವೇಳೆ ನಡೆದ ಘರ್ಷಣೆಯಲ್ಲಿ ಓರ್ವ ಹೋರಾಟಗಾರ ಮೃತಪಟ್ಟಿದ್ದ. ಈ ಘಟನೆ ನಂತರ ಸ್ಥಳದಿಂದ ಕಾಲ್ಕಿತ್ತಿದ್ದ ದೀಪ್​ ಸಿಧುವನ್ನು ನಂತರ ಬಂಧಿಸಲಾಗಿತ್ತು.

ಅಸಲಿಗೆ ಸ್ಥಳದಿಂದ ಕಾಲ್ಕಿತ್ತಿದ್ದ ದೀಪ್​ ಸಿಧು ತಲೆಮರೆಸಿಕೊಂಡಿದ್ದ. ಈತನ ಕುರಿತು ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು 1 ಲಕ್ಷ ಬಹುಮಾನ ಘೋಷಿಸಿದ್ದರು. ಕಳೆದ ವಾರ ಈತನನ್ನು ಬಂಧಿಸಲಾಗಿತ್ತು.

ಟ್ರ್ಯಾಕ್ಟರ್​ ರ‍್ಯಾಲಿಯಲ್ಲಿ ಗಲಭೆ ನಡೆಸಿದ ಪ್ರಕರಣದಲ್ಲಿ ದೀಪ್​ ಸಿಧುವನ್ನು ಬಂಧಿಸಿದ್ದ ದೆಹಲಿ ಪೊಲೀಸರು ಈ ಹಿಂದೆಯೇ 7 ದಿನಗಳ ಕಸ್ಟಡಿಗೆ ಪಡೆದಿದ್ದರು. ಆದರೆ, ಈ ಅವಧಿ ಇಂದು ಮುಗಿದ ಕಾರಣ ಆತನನ್ನು ಮತ್ತೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ಜೀತ್ ಕೌರ್ ಎದುರು ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರು ಈತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Exit mobile version