2022ರ ಐಪಿಎಲ್ ಟೂರ್ನಿಗೆ 10 ತಂಡಗಳು: ಬಿಸಿಸಿಐ ಸರ್ವಸದಸ್ಯರ ಸಭೆಯಲ್ಲಿ ನಿರ್ಧಾರ

ಅಹಮದಾಬಾದ್, ಡಿ. 24: ವಿಶ್ವದ ಶ್ರೀಮಂತ ‌ಕ್ರಿಕೆಟ್ ಲೀಗ್ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಟೂರ್ನಿಯ 2022ರ‌ ಆವೃತ್ತಿಯ ಕ್ರಿಕೆಟ್ ಟೂರ್ನಿಯಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಗೆ ಗುರುವಾರ ನಡೆದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸರ್ವಸದಸ್ಯರ ಸಭೆಯಲ್ಲಿ ನಿರ್ಧಾರ ಕೈಕೊಳ್ಳಲಾಗಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಡಳಿಯ ಪದಾಧಿಕಾರಿಗಳು, ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳು, ಐಪಿಎಲ್ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಜರಿದ್ದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಇದರೊಂದಿಗೆ ಐಪಿಎಲ್‌ನಲ್ಲಿ ಆಡುವ ತಂಡಗಳ ಸಂಖ್ಯೆಯ ಹತ್ತಕ್ಕೇರಲಿದೆ.

ಲಾಸ್ ಏಂಜಲೀಸ್‌ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸಲು ಬಿಡ್ ಸಲ್ಲಿಸಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಬೆಂಬಲ ನೀಡಲು ಕೂಡ ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು.

ಮುಂಬರುವ ಐಪಿಎಲ್‌ನಲ್ಲಿಯೇ ಎರಡು ಹೊಸ ತಂಡಗಳನ್ನು ಸೇರ್ಪಡೆ ಮಾಡುವ ಯೋಚನೆ ಮಂಡಳಿಗಿತ್ತು. ಆದರೆ ಸಮಯ ಕಡಿಮೆ ಇರುವುದರಿಂದ ತರಾತುರಿಯಲ್ಲಿ ಸರಿಯಲ್ಲ ಎಂಬ ಕಾರಣಕ್ಕೆ 2022ರ ಐಪಿಎಲ್‌ನಲ್ಲಿ ಸೇರಿಸಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಈ ವರ್ಷ ಆದಾಯ ನಷ್ಟ ಅನುಭವಿಸಿರುವ ದೇಶಿ ತಂಡಗಳ ಆಟಗಾರರಿಗೆ ಪರಿಹಾರ ನೀಡುವ ಕುರಿತು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

Exit mobile version