ಲಸಿಕಾ ಅಭಿಯಾನದಲ್ಲಿ ಈವರೆಗೆ 23.59 ಕೋಟಿ ಡೋಸ್ ಲಸಿಕೆ ವಿತರಣೆ

ನವದೆಹಲಿ, ಜೂ. 08: ದೇಶದಾದ್ಯಂತ ನಡೆಯುತ್ತಿರುವ ಲಸಿಕಾ ಅಭಿಯಾನದಲ್ಲಿ ಈವರೆಗೆ 23.59 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೋಮವಾರ 18-44 ವರ್ಷದೊಳಗಿನ 16,07,531 ಫಲಾನುಭವಿಗಳು ತಮ್ಮ ಮೊದಲ ಡೋಸ್ ಲಸಿಕೆ ಪಡೆದರೆ, ಅದೇ ವಯಸ್ಸಿನ 68,661 ಫಲಾನುಭವಿಗಳು ತಮ್ಮ ಎರಡನೇ ಡೋಸ್ ಪಡೆದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಒಟ್ಟಾರೆ, ಮೇ 1ರಿಂದ 3ನೇ ಹಂತದ ಲಸಿಕೆ ಅಭಿಯಾನ ಆರಂಭವಾದ ಬಳಿಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,02,45,100 ಜನರು ತಮ್ಮ ಮೊದಲ ಡೋಸ್ ಮತ್ತು 2,37,107 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು 18-44 ವರ್ಷ ವಯಸ್ಸಿನ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಿವೆ ಎಂದು ತಿಳಿಸಿದೆ.

ಈವರೆಗೆ ದೇಶದಲ್ಲಿ ಲಸಿಕೆ ನೀಡಿಕೆಯ ಸಂಖ್ಯೆ 23.59 ಕೋಟಿ (23,59,39,165) ಮೀರಿದೆ ಎಂದು ಸಂಜೆ 7ರ ತಾತ್ಕಾಲಿಕ ವರದಿಯಲ್ಲಿ ತಿಳಿಸಲಾಗಿದೆ.

Exit mobile version