2ನೇ ಟೆಸ್ಟ್: ಕೇನ್ ವಿಲಿಯಂಸನ್ ಶತಕ: ನ್ಯೂಜಿ಼ಲೆಂಡ್ ಹಿಡಿತದಲ್ಲಿ ಪಾಕಿಸ್ತಾನ

ಕ್ರೈಸ್ಟ್ ಚರ್ಚ್, ಜ. 04: ನಾಯಕ ಕೇನ್ ವಿಲಿಯಂಸನ್(112) ಭರ್ಜರಿ ಶತಕ ಹಾಗೂ ಹೆನ್ರಿ ನಿಕೋಲ್ಸ್(89) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿ಼ಲೆಂಡ್ ಬಿಗಿ ಹಿಡಿತ ಸಾಧಿಸಿದೆ.

ಇಲ್ಲಿನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಂತ್ಯಕ್ಕೆ ಪಾಕಿಸ್ತಾನ ತಂಡವನ್ನು ಪ್ರಥಮ ಇನ್ನಿಂಗ್ಸ್‌ನಲ್ಲಿ 297 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಕಿವೀಸ್ ಬೌಲರ್‌ಗಳು ಯಶಸ್ವಿಯಾಗಿದ್ದರು. ಹೀಗಾಗಿ
ಎರಡನೇ ‌ದಿನವಾದ ಸೋಮವಾರ ಬ್ಯಾಟಿಂಗ್ ಆರಂಭಿಸಿದ ನ್ಯೂಜಿ಼ಲೆಂಡ್ ತಂಡಕ್ಕೆ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯದಲ್ಲಿ ಮೇಲುಗೈ ತಂದುಕೊಟ್ಟರು.

ನ್ಯೂಜಿ಼ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದ ಟಾಮ್ ಲಾಥಂ(33) ಉತ್ತಮ ಆಟವಾಡಿದರೆ. ಟಾಮ್‌ ಬ್ಲಂಡಲ್(16) ಬ್ಯಾಟಿಂಗ್ ವೈಫಲ್ಯ ‌ಅನುಭವಿಸಿದರು. ಬಳಿಕ ಕಣಕ್ಕಿಳಿದ ರಾಸ್ ಟೇಲರ್(12) ಸಹ ನಿರೀಕ್ಷಿತ ಆಟವಾಡಲಿಲ್ಲ. ಪರಿಣಾಮ 73 ರನ್‌ಗಳಿಗೆ ಆರಂಭಿಕ 3 ವಿಕೆಟ್‌ಗಳನ್ನು ‌ಕಳೆದುಕೊಂಡು ಆಘಾತ ಅನುಭವಿಸಿತು. ‌ಈ ಹಂತದಲ್ಲಿ 4ನೇ ವಿಕೆಟ್‌ಗೆ ಜೊತೆಯಾದ ಕೇನ್ ವಿಲಿಯಂಸನ್(112) ಹಾಗೂ ಹೆನ್ರಿ ‌ನಿಕೋಲ್ಸ್(89) ಅಜೇಯ 215 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ‌ಆಸರೆಯಾಗಿ ನಿಂತರು.

ಎದುರಾಳಿ ಪಾಕ್ ತಂಡದ‌ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿಲಿಯಂಸನ್ ಟೆಸ್ಟ್ ವೃತ್ತಿ ಜೀವನದ 23ನೇ ಶತಕ ಬಾರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಿಕೋಲ್ಸ್(89*) ಶತಕದತ್ತ ಮುಖ ಮಾಡಿದ್ದಾರೆ. ಇವರಿಬ್ಬರ ಉತ್ತಮ ಅಮೋಘ ಬ್ಯಾಟಿಂಗ್ ನೆರವಿನಿಂದ 2ನೇ ದಿನದಂತ್ಯಕ್ಕೆ ನ್ಯೂಜಿ಼ಲೆಂಡ್ 3 ವಿಕೆಟ್ ನಷ್ಟಕ್ಕೆ 286 ರನ್‌ಗಳಿಸಿದ್ದು, ಪಾಕಿಸ್ತಾನದ ಮೊದಲ ಇನ್ನಿಂಗ್ಸ್ ಮೊತ್ತಕ್ಕೆ 11 ರನ್‌ಗಳ ಅಗತ್ಯವಿದೆ. ಹೀಗಾಗಿ ಉಭಯ ತಂಡಗಳ ನಡುವಿನ 3ನೇ ದಿನದಾಟ ಕುತೂಹಲ ಮೂಡಿಸಿದೆ.

Exit mobile version