ಕೋವಿಡ್‌ನಿಂದ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರ ಕುಟುಂಬಕ್ಕೆ 30 ಲಕ್ಷ ಪರಿಹಾರ: ಶಶಿಕಲಾ ಜೊಲ್ಲೆ

ಬೆಂಗಳೂರು, ಮೇ. 18: ಕೋವಿಡ್‌ನಿಂದ ಸಾವಿಗೀಡಾದ 12 ಅಂಗನವಾಡಿ ಕಾರ್ಯಕರ್ತೆಯರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಕೋವಿಡ್‌ನಿಂದ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಮಕ್ಕಳಿಗಾಗಿ ಪ್ರತಿ ಜಿಲ್ಲೆಯಲ್ಲೂ ಪ್ರತ್ಯೇಕ ಕೋವಿಡ್‌ ಆರೈಕೆ ಕೇಂದ್ರ ಸ್ಥಾಪಿಸಲಾಗುವುದು. ಇದಕ್ಕಾಗಿ 1098 ಸಹಾಯವಾಣಿ ಪ್ರಾರಂಭವಾಗಿದೆ. ಕೇಂದ್ರಗಳಲ್ಲಿ ಮಕ್ಕಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ. ಮಕ್ಕಳನ್ನು ದತ್ತು ಪಡೆಯುವಾಗ ದುರುಪಯೋಗವಾಗುತ್ತಿದೆ.

ಹೀಗಾಗಿ, ದತ್ತು ಪಡೆಯುವಾಗ ಮಾಹಿತಿ ನೀಡಬೇಕು. 1098ಗೆ ಕರೆ ಮಾಡಬೇಕು ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ನಿಯಮಾನುಸಾರವೇ ಮಕ್ಕಳನ್ನು ದತ್ತು ಪಡೆಯಬೇಕು ಎಂದು ತಿಳಿಸಿದ್ದಾರೆ.

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡು ರಾಜ್ಯದಲ್ಲಿ ಇಬ್ಬರು ಮಕ್ಕಳು ಅನಾಥವಾಗಿವೆ. ಚಾಮರಾಜನಗರ, ಮಂಡ್ಯದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ. ಅನಾಥ ಮಗುವಿನ ಯೋಗಕ್ಷೇಮ, ಆರೋಗ್ಯದ ಕಡೆ ಗಮನಿಸಲು ದಾನಿಗಳ ಹುಡುಕಾಟ ನಡೆಸಲಾಗುವುದು. ಅನಾಥ ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಮಾದರಿಯಲ್ಲಿ ಬಾಂಡ್ ನೀಡುವ ಸಂಬಂಧ ರಾಜ್ಯದ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Exit mobile version