ಖೋಡೇಸ್ ಗ್ರೂಪ್ ಕಂಪನಿಯಲ್ಲಿ 878 ಕೋಟಿ ಅಕ್ರಮ ಆಸ್ತಿ ಪತ್ತೆ

ಬೆಂಗಳೂರು, ಫೆ. 12: ‘ಖೋಡೇಸ್ ಗ್ರೂಪ್’ ಕಂಪೆನಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಮಾಲೀಕರ ಮನೆ, ಕಚೇರಿ ಸೇರಿದಂತೆ ಒಟ್ಟು 26 ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದ ಅಧಿಕಾರಿಗಳು ಅವುಗಳನ್ನು ಪರಿಶೀಲನೆ ನಡೆಸಿದಾಗ ರೂ.878 ಕೋಟಿಯಷ್ಟು ಅಘೋಷಿತ ಆದಾಯ ಪತ್ತೆಯಾಗಿದೆ. ತನಿಖೆ ಮುಂದುವರೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ  ಮದ್ಯ ತಯಾರಿಕಾ ಕ್ಷೇತ್ರದ ಪ್ರಮುಖ ಕಂಪನಿ ಖೋಡೇಸ್ ಗ್ರೂಪ್ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ರೂ.878.82 ಕೋಟಿಗಳಷ್ಟು ಅಕ್ರಮ ಆದಾಯ ಪತ್ತೆ ಹಚ್ಚಿದ್ದಾರೆ.

ಖೋಡೇಸ್ ಗ್ರೂಪ್ ಅಪಾರ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿದ್ದು, ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಬೆಂಗಳೂರು ಬಿಲ್ಡರ್ ಗಳ ಜೊತೆಗೂಡಿ ರೂ.692.82 ಕೋಟಿ ಆರ್ಥಿಕ ವ್ಯವಹಾರ ನಡೆಸುತ್ತಿರುವ ದಾಖಲೆಗಳು ಸಿಕ್ಕಿವೆ. ಕೇರಳ ಮೂಲಕ ಮದ್ಯ ಉತ್ಪಾದನಾ ಘಟಕವೊಂದರ ಜೊತೆ ರೂ.74 ಕೋಟಿ ವಹಿವಾಟು ನಡೆಸಿದ್ದು, ಇದನ್ನು ಲೆಕ್ಕದಲ್ಲಿ ತೋರಿಸಿಲ್ಲ. ರೂ.17 ಕೋಟಿ ನಕಲಿ ವೆಚ್ಚವನ್ನು ತೋರಿಸಲಾಗಿದೆ. ರೂ.9 ಕೋಟಿ ವಿವರಿಸಲಾಗದ ವೆಚ್ಚ ಮಾಡಲಾಗಿದೆ ಎಂದು ಮೂಲಗಳು ತಿಳಿದು ಬಂದಿದೆ.

ಹಲವು ವರ್ಷಗಳಿಂದ ತಮ್ಮ ಉದ್ಯೋಗಿಗಳು ಮತ್ತು ಸಹವರ್ತಿಗಳ ಹೆಸರಿನಲ್ಲಿ ಕೂಡಾ  ಬೇನಾಮಿ ಆಸ್ತಿಗಳಲ್ಲಿ ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆ ಮಾಡಿದೆ. ರೂ.150 ಕೋಟಿಗಿಂತ ಹೆಚ್ಚು ಮೊತ್ತವನ್ನು 35 ಮಂದಿಯ ಹೆಸರಲ್ಲಿ ಬೇನಾಮಿ ಹೂಡಿಕೆ ಮಾಡಿರುವುದು ಶೋಧ ಕಾರ್ಯ ವೇಳೆ ಪತ್ತೆಯಾಗಿದೆ. ಅಲ್ಲದೇ, ವಿದೇಶಿ ಆಸ್ತಿಗಳು ಸಹ ಪತ್ತೆಯಾಗಿವೆ. ಕಂಪನಿಯ ನಿರ್ದೇಶಕರ ಹೆಸರಲ್ಲಿ ಆ ಆಸ್ತಿಗಳಿವೆ. ತನಿಖೆಯು ಇನ್ನೂ ಮುಂದುವರೆದಿದ್ದು, ಸ್ಪಷ್ಟನೆಗಾಗಿ ಕಂಪನಿಯ ಮುಖ್ಯಸ್ಥರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಈಟಿ  ಇಲಾಖೆ ಮಾಹಿತಿ ನೀಡಿದೆ.

Exit mobile version