ರಾಜ್ಯದಲ್ಲಿ 97 ಮಂದಿಗೆ ಬ್ಲ್ಯಾಕ್ ಫಂಗಸ್: ಸಚಿವ ಸುಧಾಕರ್

ಬೆಂಗಳೂರು, ಮೇ. 17: ರಾಜ್ಯದಲ್ಲಿ ಈವರೆಗೆ 97 ಮಂದಿಗೆ ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂಧ್ರ) ರೋಗ ಬಂದಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಹೇಳಿದರು.

ಈ ರೋಗಕ್ಕೆ ಚಿಕಿತ್ಸೆ, ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚಿಸಲಾಗಿದೆ. ಸಂಜೆ 5 ಗಂಟೆಗೆ ರಾಜ್ಯ ಸರ್ಕಾರಕ್ಕೆ ಟಾಸ್ಕ್ ಫೋರ್ಸ್ ವರದಿ ನೀಡುತ್ತದೆ. ಕೊರೊನಾದಷ್ಟೇ ಕಪ್ಪು ಶಿಲೀಂಧ್ರ ರೋಗ ಹರಡುತ್ತಿಲ್ಲ. ಅನಿಯಂತ್ರಿತ ಡಯಾಬಿಟಿಸ್ ಇರುವವರಿಗೆ ಕೊರೊನಾ ಸೋಂಕು ಬಂದಾಗ ಸ್ಟಿರಾಯಿಡ್ ಬಳಸಿದರೆ ಅಂತಹವರಿಗೆ ಸ್ವಾಭಾವಿಕವಾಗಿ ಶುಗರ್ ಹೆಚ್ಚಾಗುತ್ತದೆ. ಇಂತಹವರು ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು‌ ತಿಳಿಸಿದರು.

ಕ್ಯಾನ್ಸರ್ ಪೀಡಿತರು, ಎಚ್ಐವಿ ಇರುವವರು, ಅಂಗಾಂಗ ಕಸಿ ಮಾಡಿಸಿಕೊಂಡವರಿಗೆ ಈ ಫಂಗಸ್ ತಗುಲುವ ಸಾಧ್ಯತೆಯಿದೆ. ಅಂತಹವರು ಮುಂಜಾಗ್ರತಾ ಕ್ರಮವಹಿಸಬೇಕು ಎಂದರು.

ಮೈಸೂರು ವೈದ್ಯಕೀಯ ಕಾಲೇಜು, ಶಿವಮೊಗ್ಗ, ಕಲಬುರ್ಗಿಯ ಜಿಮ್ಸ್, ಹುಬ್ಬಳ್ಳಿಯ ಕಿಮ್ಸ್, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕಪ್ಪು ಶಿಲೀಂಧ್ರ ರೋಗಕ್ಕೆ ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.

Exit mobile version