ಜೆಡಿಎಸ್‌ನ ರೈತವೋಟ್ ಬ್ಯಾಂಕ್‌ಗೆ ಎಎಪಿ ಕತ್ತರಿ!

jds

ಹಳೆಮೈಸೂರು(HaleMysuru) ಭಾಗದಲ್ಲಿ ಜೆಡಿಎಸ್(JDS) ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಹಳೆಮೈಸೂರು ಭಾಗದ ಅನೇಕ ಪ್ರಬಲ ನಾಯಕರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಜೆಡಿಎಸ್ ತೊರೆದು ಬಿಜೆಪಿ(BJP) ಮತ್ತು ಕಾಂಗ್ರೆಸ್‌ನತ್ತ(Congress) ಮುಖ ಮಾಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಕಾಲಿಟ್ಟಿರುವ ಅರವಿಂದ್ ಕೇಜ್ರಿವಾಲ್(Aravind Kejrival) ನೇತೃತ್ವದ ಆಮ್ ಆದ್ಮಿ ಪಕ್ಷವು(AAP) ಜೆಡಿಎಸ್‌ನ ಪ್ರಬಲ ಮತಬ್ಯಾಂಕ್(VoteBank) ಆಗಿರುವ ರೈತ ಮತಬ್ಯಾಂಕ್‌ಗೆ ಲಗ್ಗೆ ಇಡಲು ರಣತಂತ್ರ ರೂಪಿಸಿದೆ. ಇದರ ಭಾಗವಾಗಿ ಈಗಾಗಲೇ ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲಿ ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘದ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘವು ಆಮ್ ಆದ್ಮಿ ಪಕ್ಷದ ಪರವಾಗಿ ಕೆಲಸ ಮಾಡಲಿದೆ ಎಂದು ಕೊಡಿಹಳ್ಳಿ ಚಂದ್ರಶೇಖರ್ ಘೋಷಿಸಿದ್ದಾರೆ.

ಹೀಗಾಗಿ ಜೆಡಿಎಸ್‌ನ ರೈತ ಮತಬ್ಯಾಂಕ್‌ಗೆ ಕತ್ತರಿ ಬೀಳುವ ಸಾಧ್ಯತೆ ಹೆಚ್ಚಿದೆ. ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಅನೇಕ ರಣತಂತ್ರಗಳನ್ನು ಹೆಣೆಯುತ್ತಿದೆ. ಹಳೆಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ. ಹೀಗಾಗಿ ಬಿಜೆಪಿ ಹಳೆಮೈಸೂರು ಭಾಗದಲ್ಲಿ ನೆಲೆ ವಿಸ್ತರಿಸಿಕೊಳ್ಳಲು ಅಸಮಾಧಾನಿತ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಸೆಳೆಯಲು ಮುಂದಾಗಿದೆ. ಈಗಾಗಲೇ ಮಂಡ್ಯದಲ್ಲಿ ಲಕ್ಷ್ಮೀ ಅಶ್ವಿನ್‌ಗೌಡ, ಅಶೋಕ್ ಜಯರಾಂ ಬಿಜೆಪಿ ಸೇರಿದ್ದಾರೆ.

ಜಿ.ಟಿ ದೇವೇಗೌಡ ಮತ್ತು ಅವರ ಪುತ್ರ ಹರೀಶ್ ಗೌಡರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ತೆರೆಮರೆಯಲ್ಲಿ ಭಾರೀ ಪ್ರಯತ್ನಗಳನ್ನೇ ನಡೆಸುತ್ತಿದೆ. ಇನ್ನೊಂದೆಡೆ ಅನೇಕ ಜೆಡಿಎಸ್ ನಾಯಕರು ಪಕ್ಷಕ್ಕೆ ಗುಡ್‌ಬೈ ಹೇಳಲು ಸಜ್ಜಾಗಿದ್ದಾರೆ. ಬಸವರಾಜ್ ಹೊರಟ್ಟಿ, ಕೋಲಾರ ಶಾಸಕ ಶ್ರೀನಿವಾಸ್‌ಗೌಡ, ಮಾಲೂರು ಮಾಜಿ ಶಾಸಕ ಮಂಜುನಾಥ್‌ಗೌಡ ಮತ್ತು ದೇವೇಗೌಡರ ಆಪ್ತ ವೈಎಸ್‌ವಿ ದತ್ತ, ಮೈಸೂರಿನ ಜಿ.ಟಿ ದೇವೇಗೌಡ, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸೇರಿದಂತೆ ಅನೇಕರು ಜೆಡಿಎಸ್ ತೊರೆಯುವ ಸಾಧ್ಯತೆ ಹೆಚ್ಚಿದೆ.

Exit mobile version